RR vs GT: ಕಳೆದ ವರ್ಷ ಇದೇ ದಿನ ಆರ್‌ಸಿಬಿ ವಿಲ್ ಜ್ಯಾಕ್ಸ್; ಇಂದು ಆರ್‌ಆರ್ ವೈಭವ್ ಸೂರ್ಯವಂಶಿ
ಏಪ್ರಿಲ್ 28, 2024 ಗುಜರಾತ್ ಜೈಂಟ್ಸ್ ವಿರುದ್ಧ 201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ 16 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 206 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ವಿಲ್ ಜ್ಯಾಕ್ಸ್ 41 ಎಸೆತಗಳಲ್ಲಿ 5 ಬೌಂಡರಿ 10 ಭರ್ಜರಿ ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿ ಅಬ್ಬರಿಸಿದ್ದರು. ಏಪ್ರಿಲ್ 28, 2025 ಅದೇ ಗುಜರಾತ್ ಜೈಂಟ್ಸ್ ವಿರುದ್ಧ 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 15.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 14 ವರ್ಷದ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತಿನ ಮನೆ ಮಾತಾಗಿದ್ದಾರೆ.
ಸೋಮವಾರ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅಬ್ಬರಕ್ಕೆ ಗುಜರಾತ್ ಟೈಟಾನ್ಸ್ ಕಕ್ಕಾಬಿಕ್ಕಿಯಾಗಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್‌ಗೆ 14 ವರ್ಷದ ವೈಭವ್ ಸೂರ್ಯವಂಶಿ ಸೋಲಿನ ರುಚಿ ತೋರಿಸುವ ಮೂಲಕ ಮೂರನೇ ಸ್ಥಾನಕ್ಕೆ ಇಳಿಸಿದ್ದಾರೆ.

ದಾಖಲೆ ಬರೆದ ವೈಭವ್ ಸೂರ್ಯವಂಶಿ
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅರ್ಧಶತಕ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಕಲೆಹಾಕಲು ಕೊಡುಗೆ ನೀಡಿದರು.
210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 15.5 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು. ಅವರ ಅಬ್ಬರದ ಆಟಕ್ಕೆ ಗುಜರಾತ್ ಟೈಟಾನ್ಸ್ ಬೌಲರ್ ಗಳು ಮಂಕಾದರು.
38 ಎಸೆತಗಳಲ್ಲಿ 7 ಬೌಂಡರಿ 11 ಸಿಕ್ಸರ್ ಸಹಿತ 101 ರನ್ ಗಳಿಸುವ ಮೂಲಕ ಐಪಿಎಲ್‌ನ ಎರಡನೇ ವೇಗದ ಶತಕ ಗಳಿಸಿದರು. ಇದು ಭಾರತೀಯ ಆಟಗಾರ ದಾಖಲಿಸಿದ ವೇಗದ ಶತಕವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದರೆ, ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ ಅಜೇಯ 32 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು.












Click it and Unblock the Notifications