Ind vs Aus: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕನ್ನಡಿಗನಿಗೆ ಸಿಗುತ್ತಾ ಅವಕಾಶ?
ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗಾಲೂ ಮೂರು ಟೆಸ್ಟ್ ಮುಗಿದಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಒಂದು ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಈಗ 1-1 ಸಮಬಲ ಸಾಧಿಸಿರುವ ಎರಡೂ ತಂಡಗಳು ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಮೇಲೆ ಕಣ್ಣಿಟ್ಟಿವೆ.
ಎರಡೂ ತಂಡಗಳಿಗೂ ಮುಂದಿನ ಎರಡೂ ಪಂದ್ಯಗಳು ಭಾರಿ ಮಹತ್ವದ್ದಾಗಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಎರಡೂ ತಂಡಗಳು ಮುಂದಿನ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಕಳೆದ 12 ವರ್ಷಗಳಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲದ ಕಾರಣ ಭಾರತದ ವಿಶ್ವಾಸ ಕೂಡ ಹೆಚ್ಚಾಗಿದೆ.

ಈ ಟೆಸ್ಟ್ ಸರಣಿಯಲ್ಲಿ ಭಾರತ ಬ್ಯಾಟಿಂಗ್ ವಿಭಾಗದಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ, ಕೆಎಲ್ ರಾಹುಲ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ರೋಹಿತ್ ಶರ್ಮಾ ತಲೆ ಬಿಸಿ ಹೆಚ್ಚಿಸಿದೆ. ಸ್ವತಃ ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್‌ನಲ್ಲಿ ಪದೇ ಪದೇ ವಿಫಲವಾಗುತ್ತಿರುವುದು ತಂಡದ ಮೇಲೂ ಪರಿಣಾಮ ಬೀರಿದೆ.
ನಾಲ್ಕನೇ ಟೆಸ್ಟ್‌ನಲ್ಲಿ ತಂಡದಲ್ಲಿ ಬದಲಾವಣೆ
ಬಾಕ್ಸಿಂಗ್ ಡೇ ಟೆಸ್ಟ್ ಭಾರತದ ಪಾಲಿಗೆ ಮಹತ್ವದ್ದಾಗಿರುವ ಕಾರಣ ರೋಹಿತ್ ಶರ್ಮಾ ತಂಡದಲ್ಲಿ ಬದಲಾವಣೆ ಮಾಡುತ್ತಾರಾ ಅಥವಾ ಬ್ರಿಸ್ಬೇನ್‌ನಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುತ್ತಾರಾ ಎನ್ನುವ ಕುತೂಹಲವಿದೆ. ನಾಲ್ಕನೇ ಟೆಸ್ಟ್‌ನಲ್ಲೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ "ಯಾರು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದನ್ನು ನಮ್ಮೊಳಗೆ ಲೆಕ್ಕಾಚಾರ ಮಾಡಿಕೊಂಡಿದ್ದೇವೆ. ಅದನ್ನು ಪತ್ರಿಕಾಗೋಷ್ಠಿಯಲ್ಲಿ ಚರ್ಚಿಸಬೇಕಾದ ಅಗತ್ಯವಿಲ್ಲ. ತಂಡ ಉತ್ತಮ ಪ್ರದರ್ಶನ ನೀಡುವುದು ನಮಗೆ ಮುಖ್ಯವಾಗುತ್ತದೆ" ಎಂದು ಹೇಳಿದ್ದಾರೆ.
ಕನ್ನಡಿಗನಿಗೆ ಸಿಗುತ್ತಾ ಅವಕಾಶ?
ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್‌ಗೆ ನಾಲ್ಕನೇ ಟೆಸ್ಟ್‌ನಲ್ಲಿ ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆ ಕೂಡ ಇದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಪಡಿಕ್ಕಲ್ ಬೆಂಚ್ ಕಾಯುವ ಸಾಧ್ಯತೆಯೇ ಬಹಳ ಹೆಚ್ಚಾಗಿದೆ. ಶುಭಮನ್ ಗಿಲ್ ಬದಲಾಗಿ ಪಡಿಕ್ಕಲ್‌ಗೆ ಅವಕಾಶ ನೀಡುವ ಬಗ್ಗೆ ರೋಹಿತ್ ಶರ್ಮಾ ಚಿಂತಿಸುವ ಅವಕಾಶವಿದ್ದರೂ ಸದ್ಯದ ಮಟ್ಟಿಗೆ ಅಷ್ಟು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ.
ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ತಂಡದಲ್ಲಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದ ಕಾರಣ ಮೆಲ್ಬೋರ್ನ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಆಡಿಸಲು ಕೂಡ ರೋಹಿತ್ ಶರ್ಮಾ ಯೋಜಿಸಬಹುದು. ಅಥವಾ ಸಿರಾಜ್ ಬದಲಾಗಿ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟರ್ ಸುಂದರ್ ಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ.
ಬುಮ್ರಾ, ಆಕಾಶ್ ದೀಪ್, ನಿತೀಶ್ ರೆಡ್ಡಿ ವೇಗದ ಬೌಲಿಂಗ್ ಆಯ್ಕೆಯಾಗಿದ್ದು ಜಡೇಜಾ ಜೊತೆ ವಾಷಿಂಗ್ಟನ್ ಸುಂದರ್ ಕೂಡ ಇದ್ದರೆ ಬ್ಯಾಟಿಂಗ್‌ನಲ್ಲೂ ಬಲ ಬರಲಿದೆ ಎನ್ನುವ ಲೆಕ್ಕಾಚಾರವಿದೆ. ಮೆಲ್ಬೋರ್ನ್‌ನಲ್ಲಿ ಗೆಲುವಿಗಾಗಿ ಯಾವ ತಂಡ ಕಣಕ್ಕಿಳಿಯಲಿದೆ ಎನ್ನುವುದು ಡಿಸೆಂಬರ್ 26ರಂದು ತಿಳಿಯಲಿದೆ.
ಭಾರತದ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶುಭಮನ್ ಗಿಲ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ / ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ.












Click it and Unblock the Notifications