Nandini: ಟಿ20 ವಿಶ್ವಕಪ್‌ನಲ್ಲಿ ಎರಡು ತಂಡಗಳಿಗೆ ಕನ್ನಡಿಗರ ನಂದಿನಿ ಪ್ರಾಯೋಜಕತ್ವ
ಬೆಂಗಳೂರು, ಏಪ್ರಿಲ್. 21: ನಂದಿನಿ ಬ್ರಾಂಡ್‌ನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳನ್ನು ಪ್ರಾಯೋಜಿಸುತ್ತಿದೆ ಈ ಬಗ್ಗೆ 'ಮನಿಕಂಟ್ರೋಲ್' ವಿಶೇಷ ವರದಿ ಮಾಡಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಈ ವಿಷಯವನ್ನು ದೃಢಪಡಿಸಿದ್ದಾರೆ. "ನಾವು ಏಪ್ರಿಲ್ 20 ರಂದು ITW ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಎರಡು ತಂಡಗಳನ್ನು ಪ್ರಾಯೋಜಿಸಲು ವರ್ಕ್ ಆರ್ಡರ್ ಆದೇಶವನ್ನು ನೀಡಿದ್ದೇವೆ. ನಂದಿನಿ ಲೋಗೋ ಲೀಡ್ ಆರ್ಮ್ ಜರ್ಸಿಯಲ್ಲಿ ಬರುತ್ತದೆ (ಅಂದರೆ, ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟರ್‌ಗಳಿಗೆ ಎಡಗೈ ಮೇಲೆ)" ಎಂದು ತಿಳಿಸಿದ್ದಾರೆ.

"ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಎರಡು ತಂಡಗಳು ನಮ್ಮ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಫೋಟೋ ಶೂಟ್‌ಗಳು ಮತ್ತು ನಮ್ಮ ಉತ್ಪನ್ನಗಳನ್ನು ಅನುಮೋದಿಸುವುದರಲ್ಲಿ ತೊಡಗಿಸಿಕೊಳ್ಳುತ್ತವೆ. ಇದನ್ನು ನಾವು ಪಂದ್ಯಾವಳಿಯ ಸಮಯದಲ್ಲಿ ಪ್ರಸಾರ ಮಾಡುತ್ತೇವೆ. ಇದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಲಿದೆ" ಎಂದು ಎಂ.ಕೆ. ಜಗದೀಶ್ ಮಾಹಿತಿ ನೀಡಿದ್ದಾರೆ.
ಮಧ್ಯಪ್ರಾಚ್ಯ, ಸಿಂಗಾಪುರ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್ ಅಸ್ತಿತ್ವವನ್ನು ಹೊಂದಿದೆ. ಕೆಲವು ಫ್ರೋಜನ್ ಸಿಹಿತಿಂಡಿಗಳು ಯುಎಸ್‌ಗೆ ತಲುಪಲು ಸಹಾಯ ಮಾಡಿಕೊಡುತ್ತವೆ ಎಂದು ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
T20 ಕ್ರಿಕೆಟ್ ವಿಶ್ವಕಪ್ 2024 ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಈ ವರ್ಷದ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ.

ನಂದಿನಿಯಿಂದ ಹೊಸ ಪ್ರಾಡಕ್ಟ್
ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ ಅಮೆರಿಕದಲ್ಲಿ ಎನರ್ಜಿ ಡ್ರಿಂಕ್ ನಂದಿನಿ ಸ್ಪ್ಲಾಶ್ (whey-based energy drink) ಅನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಕೆಎಫ್‌ಎಂ ಎಂಡಿ ತಿಳಿಸಿದ್ದಾರೆ. "ನಾವು ನಂದಿನಿ ಸ್ಪ್ಲಾಶ್, ಮಾವು, ಕಿತ್ತಳೆ, ಲಿಚಿ ಮತ್ತು ನಿಂಬೆಯಂತಹ ವಿಭಿನ್ನ ಸುವಾಸನೆಗಳೊಂದಿಗೆ ಮೊದಲ ಬಾರಿಗೆ ಹಾಲೊಡಕು ಆಧಾರಿತ ಎನರ್ಜಿ ಡ್ರಿಂಕ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೇವೆ. ಯುಎಸ್‌ನಲ್ಲಿ ದೊಡ್ಡ ಮಾರಾಟ ಮಾಡಲು ಬಯಸುತ್ತಿದ್ದು, ಅದರ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಆ ಉತ್ಪನ್ನವು ಈವೆಂಟ್‌ಗೆ ಸರಿಹೊಂದುತ್ತದೆ" ಎಂದಿದ್ದಾರೆ.
"ವಿಶ್ವಕಪ್ ಸಮಯದಲ್ಲಿ ನಮ್ಮ ಉತ್ಪನ್ನಗಳು ಯುಎಸ್‌ನಲ್ಲಿ ಲಭ್ಯವಿರುವಂತೆ ನಾವು ನೋಡಿಕೊಳ್ಳುತ್ತೇವೆ, ಇದರಿಂದಾಗಿ ನಂದಿನಿ ಬ್ರ್ಯಾಂಡ್ ಜಾಗತಿಕವಾಗಿ ಮಾರಾಟವಾಗುತ್ತಿದೆ ಎಂದು ಜನರಿಗೆ ತಿಳಿಯುತ್ತದೆ. ನಂದಿನಿ ಬ್ರ್ಯಾಂಡ್ನ ಅಡಿಯಲ್ಲಿ ಅನೇಕ ಉತ್ಪನ್ನಗಳನ್ನು ಸಹ ರುಚಿ ನೋಡಬಹುದು. ಜಾಗತಿಕ ಮಟ್ಟದಲ್ಲಿ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲು ಇದು ಉತ್ತಮ ಸಮಯ" ಎಂದು ಜಗದೀಶ್ ಹೇಳಿದ್ದಾರೆ.
"ನಾವು ಯುಎಇಯಲ್ಲಿ ಇನ್ನೂ ಎರಡು ನಂದಿನಿ ಪಾರ್ಲರ್‌ಗಳನ್ನು ತೆರೆಯುತ್ತಿದ್ದೇವೆ. ಅಬುಧಾಬಿ ಮತ್ತು ಶಾರ್ಜಾದಲ್ಲಿ. ದೇಶದಲ್ಲಿ ಲೋಕಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಈ ಪಾರ್ಲರ್‌ಗಳು ಉದ್ಘಾಟನೆಗೊಳ್ಳಲಿದೆ. ಪ್ರಸ್ತುತ, ದುಬೈನಲ್ಲಿ ನಾವು ಒಂದು ನಂದಿನಿ ಪಾರ್ಲರ್ ಅನ್ನು ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.
ಕೆಎಂಎಫ್ 14 ಒಕ್ಕೂಟಗಳು, 24 ಲಕ್ಷ ಹಾಲು ಉತ್ಪಾದಕ ಸದಸ್ಯರು, 22,000 ಹಳ್ಳಿಗಳಲ್ಲಿ 14,000 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಒಳಗೊಂಡಿದೆ. ಪ್ರತಿದಿನ 8.4 ಮಿಲಿಯನ್ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಇದು 65 ಕ್ಕೂ ಹೆಚ್ಚು ಹಾಲು ಮತ್ತು ಡೈರಿ ಸಂಬಂಧಿತ ಉತ್ಪನ್ನಗಳನ್ನು ತಯಾರಿಸುತ್ತದೆ. ಹೆಚ್ಚುವರಿಯಾಗಿ, ಇದು ಸಶಸ್ತ್ರ ಪಡೆಗಳಿಗೆ ಉತ್ಪನ್ನಗಳನ್ನು ಪೂರೈಸುತ್ತದೆ ಮತ್ತು ಹಾಲನ್ನು ರಫ್ತು ಮಾಡುತ್ತದೆ. 2021-22ರಲ್ಲಿ ಕೆಎಂಎಫ್ ಸುಮಾರು 19,800 ಕೋಟಿ ರೂ.ಗಳ ವಹಿವಾಟು ನಡೆಸಿದೆ.












Click it and Unblock the Notifications