ದಾಖಲೆ ಬರೆಯಲಿರುವ ಕೊಡಗಿನ ಮುದ್ದಂಡ ಹಾಕಿ ಕಪ್: ಏನಿದರ ವಿಶೇಷ?
ಮಡಿಕೇರಿ, ಮಾರ್ಚ್ 17: ಈಗಾಗಲೇ ಗಿನ್ನಿಸ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುವುದರೊಂದಿಗೆ ಕಳೆದ ಇಪ್ಪತ್ತೈದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಈ ಬಾರಿ ಸುಮಾರು ಮುನ್ನೂರ ಎಪ್ಪತ್ತು ತಂಡಗಳು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಮಡಿಕೇರಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಒಂದು ತಿಂಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪ್ರಾಯೋಜಕ ಮುದ್ದಂಡ ಕುಟುಂಬ ಹಗಲಿರುಳು ಶ್ರಮಿಸುತ್ತಿರುವುದು ಕಂಡು ಬರುತ್ತಿದೆ.
ಈ ಬಾರಿ ಕೊಡವ ಕುಟುಂಬಗಳ ಹಾಕಿಪಂದ್ಯಾವಳಿಯಾಗಿರುವ ಮುದ್ದಂಡ ಕಪ್ ಮಾ.28 ರಿಂದ ಏ.27ರ ವರೆಗೆ ಮಡಿಕೇರಿಯ ಮೂರು ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಅಂತಿಮ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. 25ನೇ ವರ್ಷದ ಪಂದ್ಯಾವಳಿಯಾಗಿರುವುದರಿಂದ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ಜತೆಗೆ ಸುಮಾರು 370ಕ್ಕೂ ಹೆಚ್ಚು ತಂಡಗಳು ಆಟವಾಡಲಿರುವುದರಿಂದ ಯಾವುದೇ ತೊಂದರೆಗಳಾಗದಂತೆ ಮೈದಾನದ ವ್ಯವಸ್ಥೆ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವುದಲ್ಲದೆ, ಯಾವುದೇ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.

ಇನ್ನು ಮುದ್ದಂಡ ಕಪ್ ಹಾಕಿ ಪಂದ್ಯಾವಳಿ ಕುರಿತಂತೆ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಮಾಹಿತಿ ನೀಡಿದ್ದು, ಕಳೆದ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳು ಪಾಲ್ಗೊಂಡಿದ್ದವು, ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ 10 ತಂಡಗಳು ಹೆಚ್ಚುವರಿಯಾಗಿದ್ದು, 370 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಮಾ.18 ಆಗಿದ್ದು, ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಪ್ರತಿಷ್ಠಿತ ತಂಡಗಳ ನಡುವೆ ಪ್ರದರ್ಶನ ಪಂದ್ಯ
ಇನ್ನು ಮಾ.28ರಂದು ಉದ್ಘಾಟನೆಯ ಪ್ರದರ್ಶನ ಪಂದ್ಯವಾಗಿ ಕೊಡವ ಹಾಕಿ ಅಕಾಡೆಮಿ- ಇಲೆವೆನ್ ಹಾಗೂ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರ್ನಾಟಕ- ಇಲೆವೆನ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ ಎಂದರಲ್ಲದೆ, ಪಂದ್ಯಾವಳಿಯ ನಿರ್ದೇಶಕರಾಗಿ ಬಡ್ಕಡ ದೀನ ಪೂವಯ್ಯ ಹಾಗೂ ಸಂಯೋಜಕರಾಗಿ ಮುದ್ದಂಡ ರಾಯ್ ತಮ್ಮಯ್ಯ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಮುಖ್ಯ ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಇವರಿಗೆ ಸಹಾಯಕರಾಗಿ ಮಾಳೇಟಿರ ಶ್ರೀನಿವಾಸ್ ಇರಲಿದ್ದಾರೆ. ಟೈಸ್ ಪ್ರಕ್ರಿಯೆಯನ್ನು ಕೆಚ್ಚೆಟ್ಟಿರ ಪ್ರಸನ್ನ ನಿರ್ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕಳೆದ ಹಾಕಿ ಉತ್ಸವದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಒಕ್ಕದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಮಾತನಾಡಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಮಾರ್ಚ್ 19ಮತ್ತು 20 ರಂದು ವಿರಾಜಪೇಟೆಯ ಕಾವೇರಿ ಕಾಲೇಜ್ ನಲ್ಲಿ ಹಾಕಿ ತೀರ್ಪುಗಾರರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಯುವ ಸಮೂಹ ಇದರಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರಲ್ಲದೆ, ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂದ್ಯಾವಳಿಗೆ ವಿಭಿನ್ನ ಕಾರ್ಯಕ್ರಮಗಳ ಮೆರಗು
ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ರಾಜ್ಯಸಭಾ ಸದಸ್ಯ ಅಜೆಯ್ ಮಾಕನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಎರಡು ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಗ್ಯಾಲರಿ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ಹಾಕಿ ಉತ್ಸವದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆ ಹಾಕಿ ಪಂದ್ಯಾವಳಿಯೊಂದಿಗೆ ವಿಭಿನ್ನ ಕಾರ್ಯಕ್ರಮಗಳು ಕೂಡ ನಡೆಯಲಿದೆ ಎಂದರು.
ಕರಡದಿಂದ ಹೊರಡಲಿರುವ ಕ್ರೀಡಾಜ್ಯೋತಿ
ಈ ಬಾರಿ ವಿಶೇಷವಾಗಿ ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್'ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ಮಾ.25ರಂದು ಬೆಳಗ್ಗೆ 8 ಗಂಟೆಗೆ ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್ ಮನೆಯಲ್ಲಿ ಆರಂಭಗೊಳ್ಳಲಿರುವ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ.
ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications