Rishabh Pant: ಆ ತಂಡದ ಬಗ್ಗೆ ಆತಂಕವಿತ್ತು; ಎಲ್‌ಎಸ್‌ಜಿ ನಾಯಕ ರಿಷಬ್ ಪಂತ್ ಅಚ್ಚರಿ ಹೇಳಿಕೆ
ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಬ್ ಪಂತ್ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹರಾಜಾದರು. ದುಬಾರಿ ಆಟಗಾರನಿಗೆ ನಿರೀಕ್ಷೆಯಂತೆಯೇ ನಾಯಕತ್ವ ಪಟ್ಟ ಸಿಕ್ಕಿದೆ. ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ ಅಧಿಕೃತವಾಗಿ ರಿಷಬ್ ಪಂತ್‌ರನ್ನು ನಾಯಕ ಎಂದು ಘೋಷಣೆ ಮಾಡಿದೆ. ತಂಡದ ಮಾಲಿಕ ಸಂಜೀವ್ ಗೊಯೆಂಕಾ ರಿಷಬ್ ಪಂತ್‌ಗೆ ಜೆರ್ಸಿ ನೀಡುವ ಮೂಲಕ ನಾಯಕ ಎಂದು ಘೋಷಿಸಿದರು.
ರಿಷಬ್ ಪಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದು ಹರಾಜು ದಿನ ತಾನು ಎಷ್ಟು ಉದ್ವಿಗ್ನನಾಗಿದ್ದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ. ರಿಷಬ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಬಹುದು ಎಂದು ಊಹಿಸಲಾಗಿತ್ತು. ಆರ್ ಸಿಬಿ ಕೂಡ ಅವರಿಗಾಗಿ ಬಿಡ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ದೆಹಲಿಯ ಮಾಜಿ ಕೋಚ್ ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ಸೇರಿದ್ದ ಕಾರಣ ಆ ತಂಡವೇ ಬಿಡ್ ಮಾಡಲಿದೆ ಎನ್ನಲಾಗಿತ್ತು. ಎಂಎಸ್ ಧೋನಿ ಜೊತೆಗೆ ಉತ್ತಮ ನಂಟು ಹೊಂದಿರುವ ಕಾರಣ ಸಿಎಸ್‌ಕೆ ಕೂಡ ಬಿಡ್ ಮಾಡಬಹುದು ಎನ್ನಲಾಗಿತ್ತು.

ಪಂಜಾಬ್ ಸೇರಬಹುದು ಎಂದುಕೊಂಡಿದ್ದ ಪಂತ್
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಅವರು, ಪಂಜಾಬ್ ಕಿಂಗ್ಸ್ ಬಳಿಕ ಹೆಚ್ಚಿನ ಮೊತ್ತದ ಪರ್ಸ್ ಇರುವ ಕಾರಣ, ಆ ತಂಡವೇ ಕರೀದಿ ಮಾಡುತ್ತದೆ ಎನ್ನುವ ಚಿಂತೆಯಲ್ಲಿದ್ದೆ ಎನ್ನುವುದಾಗಿ ಪಂತ್ ಹೇಳಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂಪಾಯಿಗೆ ಖರೀದಿ ಮಾಡಿದಾಗ ಚಿಂತೆ ಕಡಿಮೆಯಾಯಿತು ಎಂದರು.
"ನನಗೆ ಪಂಜಾಬ್ ಬಗ್ಗೆ ಟೆನ್ಷನ್ ಇತ್ತು, ಅವರ ಬಳಿ ಹೆಚ್ಚಿನ ಪರ್ಸ್ ಇತ್ತು. ಶ್ರೇಯಸ್ ಅಯ್ಯರ್ ಪಂಜಾಬ್‌ಗೆ ಹೋದಾಗ ನಾನು ಎಲ್‌ಎಸ್‌ಜಿಗೆ ಹೋಗಬಹುದು ಎನಿಸಿತು. ಆದರೆ ಹರಾಜಿನಲ್ಲಿ ಏನಾಗುತ್ತದೆ ಎನ್ನುವುದು ನಮಗೆ ತಿಳಿದಿರಲಿಲ್ಲ, ಆದ್ದರಿಂದ ನಾನು ಆತಂಕದಲ್ಲೇ ಕಾಯುತ್ತಿದ್ದೆ" ಎಂದು ಹೇಳಿದ್ದಾರೆ.
ಮೆಗಾ ಹರಾಜು ನಡೆಯುತ್ತಿದ್ದ ಸಂದರ್ಭದಲ್ಲಿ ರಿಷಭ್ ಪಂತ್ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಆಡುತ್ತಿದ್ದರು. ಹರಾಜಿನ ಸಮಯದಲ್ಲಿ ನಾನು ಉದ್ವಿಗ್ನನಾಗಿದ್ದೆ. ಮೊದಲ ಲಿಸ್ಟ್‌ನಲ್ಲಿ ಕೊನೆಯದಾಗಿ ನನ್ನ ಹೆಸರು ಹರಾಜಿಗೆ ಬಂದಿತು, ಹರಾಜಿನ ಸಮಯದಲ್ಲಿ ರೋಹಿತ್ ಶರ್ಮಾ ಅವರ ಜೊತೆ ಕುಳಿತು ಐಪ್ಯಾಡ್‌ನಲ್ಲಿ ನಾನು ಅದನ್ನು ನೋಡುತ್ತಿದ್ದೆ, ನಾನು ಸ್ವಲ್ಪ ಆತಂಕಗೊಂಡಿದ್ದೆ ನಾನು ಮೊದಲು ಐಪಿಎಲ್ ಹರಾಜಿನಲ್ಲಿ ಇರಲಿಲ್ಲ, ಇದು ಹೊಸ ಅನುಭವ ಎಂದರು.
ರಿಷಬ್ ಪಂತ್ ಅವರನ್ನು ಗಮನದಲ್ಲಿಟ್ಟುಕೊಂಡೇ ತಂಡವನ್ನು ಕಟ್ಟಿದ್ದೇವೆ, ಅವರು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ನಮ್ಮ ಮೊದಲ ಆಯ್ಕೆಯಾಗಿದ್ದರು ಎಂದು ಮಾಲೀಕ ಸಂಜೀವ್ ಗೊಯೆಂಕಾ ಹೇಳಿದ್ದಾರೆ.












Click it and Unblock the Notifications