Paris Olympics: ರೂಮ್ ಮೇಟ್ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್
ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್, ತಮ್ಮ ರೂಮ್ ಮೇಟ್‌ನನ್ನು ಮಣಿಸಿ ಎಂಟರ ಘಟ್ಟಕ್ಕೆ ಕ್ವಾಲಿಫೈ ಆದರು.
ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಎರಡು ನೇರ ಸೆಟ್‌ಗಳಿಂದ ನಮ್ಮದೇ ದೇಶದ ಎಚ್‌ಎಸ್ ಪ್ರಣಯ್ ಅವರನ್ನು ಮಣಿಸಿದರು. ಈ ಮೂಲಕ ಲಕ್ಷ್ಯ ಸೇನ್ ಪದಕದ ಆಸೆಯನ್ನು ಚಿಗುರಿಸಿದರು. ಎರಡು ನೇರ ಸೆಟ್‌ಗಳಲ್ಲಿ ಗೆಲುವು ಕಂಡ ಲಕ್ಷ್ಯ ಸೇನ್ ಅಬ್ಬರಿಸಿದರು.

ಲಕ್ಷ್ಯ ಸೇನ್ 21-12, 21-06 ರಿಂದ ಪ್ರಣಯ್ ಅವರ ಸವಾಲನ್ನು ಕೇವಲ 39 ನಿಮಿಷಗಳ ಹೋರಾಟದಲ್ಲಿ ಮೀರಿ ನಿಂತರು. ಲಕ್ಷ್ಯ ಸೇನ್ ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದರು. ಗ್ಯಾಪ್ ಶಾಟ್, ಕ್ಲಾಸಿಕ್ ಸ್ನ್ಯಾಶ್‌ಗಳನ್ನು ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡರು. ಪಂದ್ಯದ ಯಾವುದೇ ಹಂತದಲ್ಲೂ ಪ್ರಣಯ್, ಲಕ್ಷ್ಯ ಸೇನ್ ಗೆ ಸವಾಲು ಒಡ್ಡುವ ರೀತಿ ಕಾಣಲೇ ಇಲ್ಲ.
ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 22 ವರ್ಷದ ಲಕ್ಷ್ಯ ಸೇನ್, 32 ವರ್ಷದ ಎಚ್ ಎಸ್ ಪ್ರಣಯ್ ಅವರನ್ನು ಮಣಿಸಿದರು. ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ಲಕ್ಷ್ಯ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ಚಿರಾಗ್ ಜೋಡಿಗೆ ಸೋಲು
ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಭಾರತದ ತಾರಾ ಜೋಡಿ ಮಲೇಷ್ಯಾದ ಚಿಯಾ ಆರೋನ್ ಮತ್ತು ಸೊಹ್ ವೂ ಯಿಕ್ ವಿರುದ್ಧ 21-13, 14-21, 16-21 ಅಂತರದಿಂದ ನಿರಾಸೆ ಅನುಭವಿಸಿತು.. ಇದರೊಂದಿಗೆ ಸತತ ಎರಡನೇ ಬಾರಿಗೆ ಚಿರಾಗ್-ಸಾತ್ವಿಕ್ ಅವರ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.












Click it and Unblock the Notifications