Jasprit Bumrah: ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ ಬಿರುಗಾಳಿ ಬೌಲರ್!
ಆತನ ಹೆಸರು ಕೇಳಿದರೆ ಸಾಕು ಘಟಾನುಘಟಿ ಬ್ಯಾಟ್ಸ್‌ಮನ್‌ಗಳೇ ನಡುಗುತ್ತಾರೆ. ಆತ ತನ್ನ ಕೈಯಿಂದ ಎಸೆಯುವ ಒಂದೊಂದು ಬಾಲ್ ಕೂಡ ಬೆಂಕಿ ಚೆಂಡಿನಂತೆ ನುಗ್ಗುತ್ತವೆ. ಆದರೆ ಇಂತಹ ಮಹಾನ್ ಆಟಗಾರ ಗಾಯದ ಸಮಸ್ಯೆಯಿಂದ ಭಾರತ ತಂಡ ತೊರೆದಿದ್ದರು. ಈಗ ನೋವು ಮರೆತು ಹೊಸ ಜೀವನ ಶುರು ಮಾಡ್ತಿರುವ ಖ್ಯಾತ ಬೌಲರ್, ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.
ಹೌದು, ಜುಲೈ 31 ಅಂದರೆ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಗಮನಾರ್ಹ ವಿಚಾರ ಏನಪ್ಪಾ ಅಂದ್ರೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಗೆ ನಾಯಕನಾಗಿ ರಾಕಿಂಗ್ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಬಹುನಿರೀಕ್ಷಿತ ಪುನರಾಗಮನ ಮಾಡಿದ್ದಾರೆ ವೇಗಿ ಜಸ್ಪ್ರೀತ್ ಬುಮ್ರಾ. 2022ರ ಜುಲೈ ತಿಂಗಳಲ್ಲಿ ಬುಮ್ರಾ ಬೆನ್ನು ನೋವಿನ ಕಾರಣ ಒಂದು ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದರು.

ವಿಶ್ವಕಪ್ ಸರಣಿಗೂ ಎಂಟ್ರಿ ಪಕ್ಕಾ!
29 ವರ್ಷ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಬಳಲುತ್ತಾ, ಏಷ್ಯಾ ಕಪ್ 2022, ಟಿ20 ವಿಶ್ವಕಪ್ ಸೇರಿದಂತೆ 2023ರ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ ಗೈರು ಹಾಜರಿ ಆಗಿದ್ದರು. ಇದರ ಜೊತೆಗೆ ಇನ್ನೂ ಅನೇಕ ಪ್ರಮುಖ ಪಂದ್ಯಗಳಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಗೆ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದರೊಂದಿಗೆ, ಬುಮ್ರಾ ಆಟ ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ವೇಳೆ 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೂಡ ಬುಮ್ರಾ ಕಂಪ್ಲೀಟ್ ಫಿಟ್ ಮತ್ತು ಫೈನ್ ಆಗಿರುವ ನಿರೀಕ್ಷೆ ಇದೆ.
ಗಾಯದ ಸಮಸ್ಯೆ ಗೆದ್ದ ಕನ್ನಡಿಗ!
ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತೀಯ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡವು ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮಾ, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹಲವು ಯುವ ಪ್ರತಿಭೆಗಳನ್ನು ಹೊಂದಿರಲಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಗಾಯದ ಸಮಸ್ಯೆಯಿಂದ ಹೊರಬಂದಿರುವ ಕಾರಣ ಭಾರತೀಯ ತಂಡಕ್ಕೆ ಮರಳಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಆಟಗಾರನಾಗಿದ್ದಾರೆ ಇವರು.

ಐರ್ಲೆಂಡ್ ವಿರುದ್ಧ ಮ್ಯಾಚ್ ಎಲ್ಲಿ?
ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುತ್ತಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ಈ ಇಬ್ಬರೂ ವೇಗಿಗಳು ಗರಿಷ್ಠ ಫಿಟ್‌ನೆಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ, ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಬಹು ಮಾದರಿಯ ಸರಣಿ ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಏಕದಿನ ಸರಣಿ ಗೆದ್ದು ಉತ್ತಮ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯ ಆಗಸ್ಟ್ 18ರಂದು ಮಲಾಹೈಡ್‌ನ ದಿ ವಿಲೇಜ್‌ನಲ್ಲಿ ನಡೆಯಲಿದೆ.
ಐರ್ಲ್ಯಾಂಡ್ ವಿರುದ್ಧದ ಸರಣಿಗೆ ಆಟಗಾರರು
ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.












Click it and Unblock the Notifications