Jadeja: ಪಾಕಿಸ್ತಾನ ತಂಡದ ಕೋಚ್ ಆಗ್ತೀರಾ ಎನ್ನುವ ಪ್ರಶ್ನೆಗೆ ಜಡೇಜಾ ಅಚ್ಚರಿಯ ಉತ್ತರ
ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ತಂಡದಲ್ಲಿ ಹಲವು ಆಟಗಾರರ ಬದಲಾವಣೆ ಮಾಡುವ ಜೊತೆಗೆ, ಕೋಚಿಂಗ್ ಸಿಬ್ಬಂದಿ ಕೂಡ ಬದಲಾಗಿದ್ದಾರೆ. ಪಾಕಿಸ್ತಾನ ತಂಡಕ್ಕೆ ಕೋಚ್ ಆಗುವ ನಿರೀಕ್ಷೆಯ ಬಗ್ಗೆ ಭಾರತದ ಮಾಜಿ ನಾಯಕ ಜಡೇಜಾ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.
ನವಜೋತ್ ಸಿಂಗ್ ಸಿಧು, ವೆಂಕಟೇಶ್ ಪ್ರಸಾದ್ ಮತ್ತು ಅನಿಲ್ ಕುಂಬ್ಳೆ ಅವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1996 ರ ಐಸಿಸಿ ವಿಶ್ವಕಪ್‌ನ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸ್ಮರಣೀಯ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ಹೈ-ವೋಲ್ಟೇಜ್‌ನಲ್ಲಿ, ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ ಪಾಕಿಸ್ತಾನದ ವಿರುದ್ಧ 25 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದ್ದರು.

ಭಾರತವು ಪಾಕಿಸ್ತಾನವನ್ನು ಸೋಲಿಸಿದಾಗ ಆಟಗಾರನಾಗಿದ್ದ ಜಡೇಜಾ, 2023 ರಲ್ಲಿ ಅಫ್ಘಾನಿಸ್ತಾನ ತಂಡದ ಮೆಂಟರ್ ಆಗಿ ವಿಶ್ವಕಪ್ ಹಂತಕ್ಕೆ ಮರಳಿದರು. ಜಡೇಜಾ ಅಫ್ಘಾನಿಸ್ತಾನ ಥಿಂಕ್ ಟ್ಯಾಂಕ್‌ನ ಭಾಗವಾಗಿದ್ದರು, ಅಫ್ಘಾನಿಸ್ತಾನ ಪಾಕಿಸ್ತಾನವನ್ನು ಮಣಿಸಿ ಇತಿಹಾಸ ನಿರ್ಮಿಸಿತ್ತು.
ಪಾಕಿಸ್ತಾನಕ್ಕೆ ಕೋಚ್ ಆಗ್ತಾರಾ ಜಡೇಜಾ?
ಏಕದಿನ ವಿಶ್ವಕಪ್ ನಂತರ ಸ್ಪೋರ್ಟ್ಸ್ ಟಾಕ್ ಜೊತೆಗಿನ ಸಂವಾದದಲ್ಲಿ, ಪಾಕಿಸ್ತಾನ ತಂಡದ ಕೋಚ್ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ಜಡೇಜಾ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರ ನೀಡಿದ ಅಜಯ್ ಜಡೇಜಾ "ನಾನು ಸಿದ್ಧ" ಎಂದು ತಮಾಷೆಯ ಉತ್ತರ ನೀಡಿದ್ದಾರೆ.
"ನಾನು ನನ್ನ ಕಲಿಕೆಯನ್ನು ಆಫ್ಘನ್ನರೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಪಾಕಿಸ್ತಾನವು ಒಂದು ಕಾಲದಲ್ಲಿ ಅಫ್ಘಾನಿಸ್ತಾನದಂತೆಯೇ ಇತ್ತು ಎಂದು ನಾನು ನಂಬುತ್ತೇನೆ." ಎಂದು ಜಡೇಜಾ ಸೇರಿಸಿದರು.
ಭಾರತ ಆವೃತ್ತಿಯ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಅವಿಸ್ಮರಣೀಯ ಗೆಲುವು ದಾಖಲಿಸಿದೆ. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳನ್ನು ದಾಖಲಿಸಿದೆ.
ವಿಶ್ವಕಪ್ 2023 ರಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನಕ್ಕಿಂತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಾಕಿಸ್ತಾನ ಸೆಮಿ-ಫೈನಲ್ ಹಂತವನ್ನು ಪ್ರವೇಶಿಸಲು ವಿಫಲರಾದರು. ರೌಂಡ್-ರಾಬಿನ್ ಹಂತದಲ್ಲಿ ಐದನೇ ಸ್ಥಾನ ಪಡೆದ ಪಾಕಿಸ್ತಾನ, ವಿಶ್ವಕಪ್‌ನಿಂದ ಹೊರ ಬಿದ್ದಿತ್ತು.
ವಿಶ್ವಕಪ್ ಸೋಲಿನ ನಂತರ, ಬಾಬರ್ ಅಜಂ ನಾಯಕತ್ವ ತ್ಯಜಿಸಲು ನಿರ್ಧರಿಸಿದರು ಮತ್ತು ಅವರ ಬದಲಿಗೆ ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್ ತಂಡವನ್ನು ಮುನ್ನಡೆಸಿದರೆ, ಶಾಹಿನ್ ಅಫ್ರಿದಿ ಟಿ20 ಮತ್ತು ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ವಿಶ್ವಕಪ್‌ನಲ್ಲಿ ಫ್ಲಾಪ್ ಶೋ ನಂತರ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿರುವ ಪಾಕಿಸ್ತಾನ ತಂಡಕ್ಕೆ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ನಿರ್ದೇಶಕರನ್ನಾಗಿ ನೇಮಕವಾಗಿದ್ದಾರೆ. ಹಫೀಜ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳಿಗೆ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಕೂಡ ಆಗಿದ್ದಾರೆ.












Click it and Unblock the Notifications