KL Rahul: ಕಾಂತಾರ ನನ್ನಿಷ್ಟದ ಸಿನಿಮಾ ನನ್ನ ಸೆಲೆಬ್ರೇಷನ್‌ಗೆ ಅದೇ ಕಾರಣ ಎಂದ ಕನ್ನಡಿಗ ಕೆಎಲ್ ರಾಹುಲ್
ಗುರುವಾರ ರಾತ್ರಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಅಬ್ಬರಿಸಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಸರೆಯಾದ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಿಕ್ಸರ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟ ಬಳಿಕ ಅವರು ಸಂಭ್ರಮಿಸಿದ ರೀತಿ ಸಿಕ್ಕಾಪಟ್ಟೆ ವಿಶೇಷವಾಗಿತ್ತು, ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ತಂಡವನ್ನು ಗೆಲ್ಲಿಸುತ್ತಿದ್ದಂತೆ ಬ್ಯಾಟ್‌ನಿಂದ ವೃತ್ತ ಬರೆದ ಅವರು, ಇದು ನನ್ನ ಮೈದಾನ ಎಂದು ಹೇಳಿದರು. ಸಾಮಾನ್ಯವಾಗಿ ಶಾಂತವಾಗಿರುವ ಕೆಎಲ್ ರಾಹುಲ್ ಉಗ್ರಾವತಾರ ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡರು. ಆರ್ ಸಿಬಿಗೆ ಆಡಬೇಕು ಎಂದು ಬಹಿರಂಗವಾಗಿಯೇ ಅವರು ಆಸೆ ವ್ಯಕ್ತಪಡಿಸಿದ್ದರು. ಮೆಗಾ ಹರಾಜಿನಲ್ಲಿ ಆರ್ ಸಿಬಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲಿ ಎಂದು ಅಭಿಮಾನಿಗಳು ಕೂಡ ಒತ್ತಾಯಿಸಿದ್ದರು. ಆದರೆ ಆರ್ ಸಿಬಿ 10.75 ಕೋಟಿ ರೂಪಾಯಿವರೆಗೆ ಬಿಡ್ ಮಾಡಿ ಸುಮ್ಮನಾಯಿತು. 14 ಕೋಟಿ ರೂಪಾಯಿಗೆ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಎರಡು ಸತತ ಅರ್ಧಶತಕ ಸಿಡಿಸಿರುವ ಕೆಎಲ್ ರಾಹುಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಸಂಭ್ರಮದ ಹಿಂದಿನ ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ. ಯಾವ ಕಾರಣಕ್ಕೆ ಹಾಗೆ ಮಾಡಿದೆ, ಅದರ ಅರ್ಥವೇನು ಎಂದು ಸ್ವತಃ ಅವರೇ ಹೇಳಿದ್ದಾರೆ.
ಕಾಂತಾರ ಸಿನಿಮಾ ಪ್ರೇರಣೆ
ಕೆಎಲ್ ರಾಹುಲ್ ಪಂದ್ಯದ ನಂತರ ಸ್ಪಷ್ಟತೆಯನ್ನು ನೀಡಿದ್ದು, "ಇದು ನನಗೆ ವಿಶೇಷ ಸ್ಥಳ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಮಾಧ್ಯಮ ತಂಡಕ್ಕೆ ತಿಳಸಿದ್ದಾರೆ. "ಆ ಆಚರಣೆ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದಾದ ಕಾಂತಾರದಿಂದ ಪ್ರೇರಣೆ ಪಡೆದಿದ್ದು. ಹೌದು, ಈ ಮೈದಾನ, ಈ ಮನೆ, ಈ ಟರ್ಫ್ ನಾನು ಬೆಳೆದ ಸ್ಥಳ ಮತ್ತು ಇದು ನನ್ನದು ಎಂಬ ಹೆಮ್ಮೆ" ಎಂದಿದ್ದಾರೆ.
ಕಾಂತಾರ ಸಿನಿಮಾದ ಹಿನ್ನಲೆ ಸಂಗೀತದೊಂದಿದೆ ಡೆಲ್ಲಿ ಕ್ಯಾಪಿಟಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಸದ್ಯ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಆರ್ ಸಿಬಿ ಸೋತರೂ ಕನ್ನಡಿಗ ಕೆಎಲ್ ರಾಹುಲ್ ಉತ್ತಮವಾಗಿ ಆಡಿದ್ದು ಅಭಿಮಾನಿಗಳಿಗೆ ಸಮಧಾನ ತಂದಿದೆ.
164 ರನ್‌ಗಳನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 10 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಕೆಎಲ್ ರಾಹುಲ್ ಮಾಸ್ಟರ್‌ಕ್ಲಾಸ್ ಬೌಲಿಂಗ್ ಮಾಡಿದರು. 57 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿದರು. ಹೇಜಲ್‌ವುಡ್ ವಿರುದ್ಧ ಒಂದೇ ಓವರ್ ನಲ್ಲಿ 21 ರನ್ ಗಳಿಸಿ ಮಿಂಚಿದರು.












Click it and Unblock the Notifications