IPL 2024: ಸ್ಟಾರ್ ಪ್ಲೇಯರ್ ಫುಲ್ ಫಿಟ್: ಹಾರ್ದಿಕ್ ಪಾಂಡ್ಯ ಫುಲ್ ಖುಷ್
ಮುಂಬೈ ಇಂಡಿಯನ್ಸ್ ಐಪಿಎಲ್ 2024ರಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಲು ಹೆಣಗಾಟ ನಡೆಸುತ್ತಿದೆ. ಸಾಲು ಸಾಲು ಸೋಲುಗಳಿಂದ ತಂಡ ಬೇಸತ್ತು ಹೋಗಿದೆ. ಅಲ್ಲದೆ ನೂತನ ನಾಯಕನ ಚಿಂತೆಯನ್ನು ಸರಣಿ ಸೋಲುಗಳು ಹೆಚ್ಚಿಸಿವೆ. ಈ ಸೋಲಿಗೆ ಫುಲ್ ಸ್ಟಾಪ್ ಬೀಳೋದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಿಜಕ್ಕೂ ಈ ಸುದ್ದಿ ಹಾರ್ದಿಕ್ ಪಾಂಡ್ಯ ಮುಖದಲ್ಲಿನ ಚಿಂತೆಯ ಗೆರೆಗಳನ್ನು ದೂರ ಮಾಡುವುದರಲ್ಲಿ ಸಂಶಯವೇ ಇಲ್ಲ. ಸ್ಟಾರ್ ಆಟಗಾರರನ್ನು ಹೊಂದಿದ್ದರು, ಮುಂಬೈ ಸೋಲುನ್ನು ಕಾಣುತ್ತಿರುವುದು ಮ್ಯಾನೇಜ್ಮೆಂಟ್ ಗೆ ತಲೆನೋವಾಗಿದೆ. ಈ ವೇಳೆ ಎನ್‌ಸಿಎ ನೀಡಿರುವ ಒಂದು ವರದಿ ಮುಂಬೈ ತಂಡದಲ್ಲಿ ನವ ಉತ್ಸಾಹವನ್ನು ತುಂಬಲಿದೆ.

ಮುಂಬೈಗೆ ಸೇರಲಿದ್ದಾರೆ ನಂಬರ್ 1 ಬ್ಯಾಟರ್
ಕ್ರಿಕ್‌ಬಜ್ ಅವರ ವರದಿಯಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ವಿಶ್ವದ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಮೈದಾನಕ್ಕೆ ಇಳಿಯುವ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. ಸೂರ್ಯ ಎಲ್ಲವೂ ಅಂದುಕೊಂಡತೆ ಆದರೆ, ಶುಕ್ರವಾರ ತಂಡ ಸೇರಿಕೊಳ್ಳಲಿದ್ದಾರೆ. ಈ ಸುದ್ದಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಡಬಲ್ ಖುಷಿ ನೀಡಿದೆ.
ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್
ಕಳೆದ ವರ್ಷ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಶತಕ ಸಿಡಿಸಿದ ನಂತರ ಸೂರ್ಯಕುಮಾರ್‌ಗೆ ಕ್ರಿಕೆಟ್ ಮೈದಾನಕ್ಕೆ ಪ್ರವೇಶಿಸಿರಲು ಸಾಧ್ಯವೇ ಆಗಿರಲಿಲ್ಲ. ಅವರು ಪಾದದ ಗಾಯದಿಂದ ಬಳಲುತ್ತಿದ್ದರು. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಇದರ ನಂತರ, ಅವರು ಕ್ರೀಡಾ ಹರ್ನಿಯಾಗೆ ತುತ್ತಾಗಿದ್ದರು. ಇದರಿಂದಾಗಿ ಸೂರ್ಯ ಮೈದಾನಕ್ಕೆ ಇಳಿಯುವುದು ತಡವಾಯಿತು. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಎನ್‌ಸಿಎ ಮೇಲ್ವಿಚಾರಣೆಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಮಿಡ್ಲ್ ಆರ್ಡ್‌ಗೆ ಇವರೇ ಬಲ
33 ವರ್ಷದ ಸೂರ್ಯಕುಮಾರ್ ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ತಯಾರಿ ನಡೆಸಲು ತಂಡದ ಅಭ್ಯಾಸ ಸೆಷನ್‌ಗೆ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಪಂದ್ಯ ಏಪ್ರಿಲ್ 7 ರಂದು ಮಧ್ಯಾಹ್ನ ನಡೆಯಲಿದೆ. ನೆಟ್ ಸೆಷನ್‌ಗಳಲ್ಲಿ ಅವರ ಫಿಟ್‌ನೆಸ್ ಆಧಾರದ ಮೇಲೆ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುವುದು ಎಂದು ತಿಳಿದು ಬಂದಿದೆ.
ಈ ಋತುವಿನ ಆರಂಭ ಮುಂಬೈ ಇಂಡಿಯನ್ಸ್‌ಗೆ ಉತ್ತಮವಾಗಿರಲಿಲ್ಲ. ಐಪಿಎಲ್ 2024 ರ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಫೇಲ್ ಆಗಿದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವದ ಕೊರತೆಯಿದ್ದು ಎದ್ದು ಕಾಣುತ್ತಿದೆ, ಅದರ ಲಾಭವನ್ನು ಎದುರಾಳಿ ತಂಡ ಪಡೆಯುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಮುಂಬೈ ಗುಜರಾತ್ ವಿರುದ್ಧ ಗೆಲುವಿನ ಸನಿಹದಲ್ಲಿದ್ದರೂ ಸೋಲು ಕಂಡಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವಂತೂ ಐಪಿಎಲ್ ಇತಿಹಾಸದ ಪುಟ ಸೇರಿತು. ಸದ್ಯ ಮುಂಬೈ ಇಂಡಿಯನ್ಸ್ ಮಧ್ಯಮ ಕ್ರಮಾಂಕ ಬಲಾಢ್ಯವಾಗಬೇಕಾದರೆ ಸೂರ್ಯಕುಮಾರ್ ಯಾದವ್ ಆಗಮನ ಅನಿವಾರ್ಯ.
ಹೇಗಿದೆ ಐಪಿಎಲ್‌ನಲ್ಲಿ ಪ್ರದರ್ಶನ?
ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬವ ಆಟಗಾರ ಸೂರ್ಯಕುಮಾರ್ ಯಾದವ್ ಆಡಿದ 139 ಪಂದ್ಯಗಳಲ್ಲಿ 3249 ರನ್ ಸಿಡಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಹಾಗೂ 1 ಶತಕ ಸೇರಿದೆ. ಅಲ್ಲದೆ 349 ಬೌಂಡರಿ, 112 ಸಿಕ್ಸರ್ ಬಾರಿಸಿದ್ದಾರೆ. ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಎದುರಾಳಿಗಳನ್ನು ಕಟ್ಟಿ ಹಾಕುವ ಸ್ಕೈ ಆಗಮನದ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ.












Click it and Unblock the Notifications