IPL 2024: ಐಪಿಎಲ್ ಆಡಲು ಕೆಎಲ್ ರಾಹುಲ್ ಫಿಟ್; ಷರತ್ತು ಹಾಕಿದ ಎನ್‌ಸಿಎ
ಇಂಡಿಯನ್ ಪ್ರೀಮಿಯರ್ ಲೀಗ್‌ನ 2024 ರ ಆರಂಭಕ್ಕೆ ಕೆಲವು ದಿನಗಳಿರುವಾಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಶುಭ ಸುದ್ದಿ ಸಿಕ್ಕಿದೆ. ತಂಡದ ನಾಯಕ ಕೆಎಲ್ ರಾಹುಲ್ ಅವರು ಎನ್‌ಸಿಎ ಯಿಂದ ಕ್ಲಿಯರೆನ್ಸ್ ಪಡೆದುಕೊಂಡಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಿದ ಬಳಿಕ ಉಳಿದ ನಾಲ್ಕು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಈಗ ಅವರು ಫಿಟ್ ಆಗಿದ್ದು ಐಪಿಎಲ್‌ನಲ್ಲಿ ಆಡಲು ಎನ್‌ಸಿಎ ಹಸಿರು ನಿಶಾನೆ ತೋರಿಸಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆದಿರುವ ಕೆಎಲ್ ರಾಹುಲ್ ಇನ್ನು ಎರಡು ದಿನಗಳಲ್ಲಿ ತಂಡವನ್ನು ಸೇರುವ ಸಾಧ್ಯತೆ ಇದೆ. ಎಲ್‌ಎಸ್‌ಜಿ ಭಾನುವಾರ (ಮಾರ್ಚ್ 24) ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ.
ಷರತ್ತುಗಳು ಅನ್ವಯ!
ರಾಹುಲ್ ಫಿಟ್ ಎಂದು ಘೋಷಿಸಲ್ಪಟ್ಟಿದ್ದರೂ, ಬಿಸಿಸಿಐನ ವೈದ್ಯಕೀಯ ತಂಡವು ಪಂದ್ಯಾವಳಿಯ ಆರಂಭಿಕ ಹಂತಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ತೆಗೆದುಕೊಳ್ಳದಂತೆ ಅವರಿಗೆ ಸಲಹೆ ನೀಡಿದ್ದು, ಬ್ಯಾಟಿಂಗ್‌ನತ್ತ ಮಾತ್ರ ಗಮನ ಹರಿಸುವಂತೆ ಒತ್ತಾಯಿಸಿದೆ.
ಭಾರತೀಯ ಮಂಡಳಿಯ ಮೂಲದ ಪ್ರಕಾರ, "ಅವರು ಫಿಟ್ ಆಗಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಐಪಿಎಲ್ ಫ್ರಾಂಚೈಸಿಗೆ ಸೇರಬಹುದು. ತೊಡೆ ಭಾಗದಲ್ಲಿ ನೋವಿನಿಂದ ಬಳಲುತ್ತಿದ್ದರು ಮತ್ತು ಚುಚ್ಚುಮದ್ದನ್ನು ಸಹ ಪಡೆದರು. ಪುನರ್ವಸತಿ ಪಡೆದ ಬಳಿಕ ಎನ್‌ಸಿಎ ಈಗ ಅವರನ್ನು ಫಿಟ್ ಎಂದು ಘೋಷಿಸಿದೆ. ಆದಾಗ್ಯೂ, ತಕ್ಷಣವೇ ವಿಕೆಟ್ ಕೀಪಿಂಗ್ ಮಾಡದಂತೆ ಅವರಿಗೆ ಸಲಹೆ ನೀಡಲಾಗಿದೆ." ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ.
ಹೈದರಾಬಾದ್ ಟೆಸ್ಟ್‌ನ ನಂತರ ರಾಹುಲ್ ತಮ್ಮ ಬಲ ಕ್ವಾಡ್ರೈಸ್‌ಪ್ಸ್‌ನಲ್ಲಿ ನೋವು ಅನುಭವಿಸಿದರು. ಉಳಿದ ನಾಲ್ಕು ಪಂದ್ಯಗಳಲ್ಲಿ ಆಡಲಿಲ್ಲ.
ಆರಂಭದಲ್ಲಿ ಬಿಸಿಸಿಐ 90 ಪ್ರತಿಶತದಷ್ಟು ಪಂದ್ಯದ ಫಿಟ್‌ನೆಸ್‌ನಲ್ಲಿದೆ ಎಂದು ವರದಿ ಮಾಡಲಾಗಿತ್ತು, ರಾಹುಲ್ ಅವರ ಪ್ರಗತಿಯನ್ನು ಬಿಸಿಸಿಐ ವೈದ್ಯಕೀಯ ತಂಡವು ನಿಕಟವಾಗಿ ಗಮನಿಸಿತ್ತು. ಆದರೆ, ಇಂಗ್ಲೆಂಡ್‌ನಲ್ಲಿರುವ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ರಾಹುಲ್ ವಿದೇಶದಲ್ಲಿ ಮತ್ತಷ್ಟು ತಜ್ಞರ ಸಲಹೆ ಪಡೆದುಕೊಂಡಿದ್ದರು.












Click it and Unblock the Notifications