ವಿರಾಟ್ ದಾಖಲೆ ಅಳಿಸಿ ಎಲೈಟ್ ಕ್ಲಬ್‌ಗೆ ಎಂಟ್ರಿ ಪಡೆಯುವ ಕನಸಿನಲ್ಲಿ ರಿಷಭ್ ಪಂತ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಜುಲೈ 3ರಿಂದ ಎಡ್ಜ್‌ಬಸ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆ ಭಾರತ ತಂಡದ್ದಾಗಿದೆ. ಹೆಡಿಂಗ್ಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 371 ರನ್‌ಗಳ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಶುಭಮನ್ ಗಿಲ್ ಪಡೆ ಎಡವಿದೆ. ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ, ಜಯ ಸಾಧಿಸುವ ಪ್ಲ್ಯಾನ್ ಟೀಮ್ ಇಂಡಿಯಾದ್ದಾಗಿದೆ. ಈ ವೇಳೆ ಎಲ್ಲರ ಕಣ್ಣುಗಳು ರಿಷಭ್ ಪಂತ್ ಅವರ ಮೇಲೆ ನೆಟ್ಟಿರಲಿವೆ.
ರಿಷಭ್ ಪಂತ್, ಟೀಮ್ ಇಂಡಿಯಾದ ಪರ ಮೊದಲ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಟಗಾರ. ಇವರು ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ಎದುರಾಳಿ ನೆಲದಲ್ಲಿ, ಎರಡೂ ಇನಿಂಗ್ಸ್‌ಗಳಲ್ಲೂ ಶತಕ ಬಾರಿಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗ ಇವರ ಚಿತ್ತ ವಿರಾಟ್ ಅವರ ದೊಡ್ಡ ದಾಖಲೆಯ ಮೇಲೆ ನೆಟ್ಟಿದೆ.

ಲೀಡ್ಸ್‌ನಲ್ಲಿ ರಿಷಭ್ ಪಂತ್ ಅವರ ಆಟವನ್ನು ಕಂಡ ಅಭಿಮಾನಿಗಳು, ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಎಡ್ಜ್‌ಬಸ್ಟನ್‌ನಲ್ಲೂ ಇವರು ಇದೇ ರೀತಿಯ ಸಾಧನೆ ಮಾಡಬಹುದು ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ. ಒಂದು ವೇಳೆ ಪಂತ್ ಇದೇ ರೀತಿಯ ಸಾಧನೆಯನ್ನು ಎರಡನೇ ಟೆಸ್ಟ್‌ನಲ್ಲಿ ಮಾಡಿದ್ದೇ ಆದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಗೆ ಅಪಾಯ ಕಾದಿದೆ.
ವಿರಾಟ್ ಯಾವ ದಾಖಲೆಗೆ ಅಪಾಯ?
ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಸಮ ಸಾಧನೆ ಮಾಡಿದ್ದಾರೆ. ಈ ಎಲ್ಲ ಸ್ಟಾರ್ ಆಟಗಾರರು ಇಂಗ್ಲೆಂಡ್ ವಿರುದ್ಧ 5 ಶತಕ ಸಿಡಿಸಿದ್ದಾರೆ. ಇನ್ನು ಈ ದಾಖಲೆಯನ್ನು ಮೀರಲು ರಿಷಭ್‌ಗೆ ಇನ್ನೊಂದು ಶತಕದ ಅವಶ್ಯಕತೆ ಇದೆ. ಎರಡನೇ ಟೆಸ್ಟ್‌ನಲ್ಲಿ ರಿಷಭ್ ಶತಕದ ಸಾಧನೆಯನ್ನು ಮಾಡಿದ್ದೇ ಆದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಬ್ರೇಕ್ ಆಗುತ್ತದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್‌ಗೆ ಅಗ್ರ ಸ್ಥಾನ. ಈ ಸ್ಟಾರ್ಸ್ ಆಂಗ್ಲರ ವಿರುದ್ಧ ತಲಾ ಏಳು ಶತಕಗಳನ್ನು ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ಧಿನ್ ಇದ್ದು ಇವರ ಖಾತೆಯಲ್ಲಿ ಆರು ಶತಕಗಳು ಇವೆ. ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಇನ್ನು ಕನಿಷ್ಠ 4 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಮಾಡಲಿದ್ದಾರೆ. ಈ ವೇಳೆ ಇದೇ ಫಾರ್ಮ್‌ನ್ನು ಮುಂದುವರೆಸಿದರೆ, ದಿಗ್ಗಜ ಆಟಗಾರರ ದಾಖಲೆ ಬ್ರೇಕ್ ಆಗುವು ಸಾಧ್ಯತೆ ಹೆಚ್ಚಿದೆ.












Click it and Unblock the Notifications