Team India: ವಿಶ್ವ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ: ಎಲ್ಲಾ ಮಾದರಿಯಲ್ಲೂ ನಾವೇ ನಂ.1!
ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 4-1 ಅಂತರದಲ್ಲಿ ಸರಣಿ ಗೆದ್ದಿತ್ತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ಬಳಿಕ ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ಕೂಡ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ. ಕೊನೆಯ ಪಂದ್ಯ ಗೆಲ್ಲುವ ಮುನ್ನ ಭಾರತ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿತ್ತು, ಆದರೆ ಇನ್ನಿಂಗ್ಸ್ ಮತ್ತು 64 ರನ್‌ಗಳ ಗೆಲುವು ಸಾಧಿಸಿದ ಬಳಿಕ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದರೂ, ಭಾರತದ ಫಾರ್ಮ್ ಮತ್ತು ಪ್ರದರ್ಶನಗಳು ಅವರನ್ನು ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ಭಾರತ ತಂಡ ತವರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದ ಬಳಿಕ ಟಿ20 ಸ್ವರೂಪದಲ್ಲಿ ನಂಬರ್ 1 ಸ್ಥಾನಕ್ಕೇರಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ
ಐಸಿಸಿ ತಂಡದ ಶ್ರೇಯಾಂಕ ಮಾತ್ರವಲ್ಲ, ಇಂಗ್ಲೆಂಡ್ ವಿರುದ್ಧದ ಅದ್ಭುತ ಗೆಲುವಿನೊಂದಿಗೆ, ಭಾರತವು ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೂಡ ಅಗ್ರಸ್ಥಾನದಲ್ಲಿದೆ. 2025 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲು ಭಾರತವು ತನ್ನ ಮುಂದಿನ 10 ಪಂದ್ಯಗಳಲ್ಲಿ ಕೇವಲ 5 ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಸಾಕಾಗುತ್ತದೆ.
ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ 1 ಶ್ರೇಯಾಂಕವು ಟೀಮ್ ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. 2013 ರಿಂದ ಐಸಿಸಿ ಟ್ರೋಫಿಯಿಂದ ವಂಚಿತವಾಗಿರುವ ಭಾರತವು ಲೆಕ್ಕವಿಲ್ಲದಷ್ಟು ಸಂದರ್ಭಗಳಲ್ಲಿ ಸೆಮಿಫೈನಲ್, ಫೈನಲ್ ನಲ್ಲಿ ಸೋತು ನಿರಾಸೆ ಅನುಭವಿಸಿದೆ. ಏಕದಿನ ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತವು ಐಸಿಸಿ ಪ್ರಶಸ್ತಿಯ ಬರ ನೀಗಿಸಲು ರಣತಂತ್ರ ರೂಪಿಸುತ್ತಿದೆ.












Click it and Unblock the Notifications