T20 World Cup: ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು: ಇನ್ನೂ ಕಷ್ಟವಿದೆ ಭಾರತದ ಸೆಮಿಫೈನಲ್ ಹಾದಿ!
ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 58 ರನ್‌ಗಳಿಂದ ಸೋತ ಬಳಿಕ ಗೆಲುವಿನ ಹಾದಿಗೆ ಮರಳಿದ ಭಾರತ ತಂಡ, ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬುಧವಾರ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 82 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಆದರೂ ಭಾರತ ಸೆಮಿಫೈನಲ್ ತಲುಪುವ ಹಾದಿ ಇನ್ನೂ ಸುಲಭವಾಗಿಲ್ಲ.
ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 172 ರನ್ ಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತ ಗಳಿಸಿದ ದೊಡ್ಡ ಮೊತ್ತವಾಗಿದೆ. ಸ್ಮೃತಿ ಮಂಧಾನ 28 ಎಸೆತಗಳಲ್ಲಿ 50 ರನ್ ಗಳಿಸಿದರೆ, ಶಫಾಲಿ ವರ್ಮಾ 43 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 27 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದರು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ 6 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 19.5 ಓವರ್ ಗಳಲ್ಲಿ 90 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ತಲಾ 3 ವಿಕೆಟ್ ಪಡೆದರೆ. ರೇಣುಕಾಸಿಂಗ್ ಠಾಕೂರ್ 2 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಭಾರತದ ಸೆಮಿಫೈನಲ್ ಹಾದಿ
ಶ್ರೀಲಂಕಾ ವಿರುದ್ಧ 82 ರನ್‌ಗಳಿಂದ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ರನ್‌ರೇಟ್ ಉತ್ತಮವಾಗಿದೆ. ಋಣಾತ್ಮಕವಾಗಿದ್ದ ಭಾರತದ ನೆಟ್‌ರನ್ ರೇಟ್ ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕ ಧನಾತ್ಮಕ (+0.576) ವಾಗಿದೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಆಸ್ಟ್ರೇಲಿಯಾ ಮಹಿಳಾ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡು ಪಂದ್ಯಗಳನ್ನು ಗೆದ್ದಿದ್ದು, ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಆಡಬೇಕಿದೆ.
ಪಾಕಿಸ್ತಾನ ಮಹಿಳಾ ತಂಡ ಸದ್ಯ ಮೂರನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಕೂಡ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದ್ದು ಶ್ರೀಲಂಕಾ, ಪಾಕಿಸ್ತಾನದ ವಿರುದ್ಧ ಸೆಣೆಸಲಿದೆ. ಒಂದು ವೇಳೆ ನ್ಯೂಜಿಲೆಂಡ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಭಾರತದ ಹಾದಿ ಕಠಿಣವಾಗುವ ಸಾಧ್ಯತೆ ಇದೆ.
ಭಾರತಕ್ಕೆ ಇನ್ನೊಂದು ಪಂದ್ಯ ಮಾತ್ರ ಉಳಿದಿದ್ದು ಆಸ್ಟ್ರೇಲಿಯಾ ವಿರುದ್ಧ ಗೆಲುವ ಸಾಧಿಸಿದರೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ನ್ಯೂಜಿಲೆಂಡ್ ಏನಾದರೂ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಭಾರತ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು.
ಅಕ್ಟೋಬರ್ 13ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದ್ದು, ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಭಾರತದ ಆತ್ಮವಿಶ್ವಾಸ ಹೆಚ್ಚಾಗಿದ್ದು ಆಸ್ಟ್ರೇಲಿಯಾವನ್ನು ಮಣಿಸುವ ವಿಶ್ವಾಸದಲ್ಲಿದೆ.












Click it and Unblock the Notifications