Hardik Pandya: ಭಾರತ ತಂಡಕ್ಕೆ ಆಘಾತ! ಈ ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಕೆಟ್ಟ ಸುದ್ದಿ ಸಿಕ್ಕಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳ ವಿರುದ್ಧದ ಭಾರತದ ಪಂದ್ಯಗಳಿಗೆ ಪಾಂಡ್ಯ ಅಲಭ್ಯರಾಗಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ನವೆಂಬರ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ಒಳಗಾದ ಹಾರ್ದಿಕ್ ಪಾಂಡ್ಯ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ)ಯಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಅವರು ಇನ್ನೂ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿಲ್ಲ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಬೌಲಿಂಗ್ ಮಾಡದೇ ಇದ್ದರು ಬ್ಯಾಟರ್ ಆಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗಿತ್ತಾದರೂ, ತಂಡದ ಮ್ಯಾನೇಜ್‌ಮೆಂಟ್ ಆ ಸಾಧ್ಯತೆಯನ್ನು ತಳ್ಳಿಹಾಕಿದೆ. ಭಾರತ ಸುಲಭವಾಗಿ ಸೆಮಿಫೈನಲ್ ತಲುಪುವುದು ಖಚಿತವಾಗಿರುವ ಕಾರಣ, ಪಾಂಡ್ಯ ಅವರು ಸಂಪೂರ್ಣ ಫಿಟ್ ಆಗುವವರೆಗೆ ಕಾಯಲು ನಿರ್ಧರಿಸಿದೆ.
ಎಡಪಾದಕ್ಕೆ ಗಾಯ ಮಾಡಿಕೊಂಡಿದ್ದ ಪಾಂಡ್ಯ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ವೇಳೆ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಮಾಡುವ ವೇಳೆ ಚಂಡು ತಡೆಯುವಾಗ ಎಡ ಪಾದಕ್ಕೆ ಗಾಯ ಮಾಡಿಕೊಂಡಿದ್ದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಂತೆ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆಗೆ ಫಿಟ್ ಗುವ ಸಾಧ್ಯತೆ ಇದೆ. ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಅದಕ್ಕೂ ಮುನ್ನ ಅಕ್ಟೋಬರ್ 29ರಂದು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಭಾರತ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನಂತರ ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಸೆಮಿಫೈನಲ್ ಸ್ಥಾನ ಖಚಿತ
ಈ ಎರಡೂ ಪಂದ್ಯಗಳಲ್ಲಿ ಗೆದ್ದರೆ ಭಾರತದ ಸೆಮಿಫೈನಲ್ ಸ್ಥಾನ ಖಚಿತವಾಗಲಿದೆ. ಭಾರತದ ಸೆಮಿಫೈನಲ್ ಸ್ಥಾನ ಖಚಿತವಾದ ನಂತರ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಕೂಡ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಿತ್ತು, ಆದರೆ ಪಾಂಡ್ಯ ಅಲಭ್ಯತೆಯಿಂದ ಈಗ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸಿಗುವುದು ಕಷ್ಟವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಂತರ ಭಾರತ ತಂಡಕ್ಕೆ ಮುಂದಿನ ಪಂದ್ಯಕ್ಕೆ 7 ದಿನಗಳ ಅಂತರ ಇರುವುದರಿಂದ 2 ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಧರ್ಮಶಾಲಾದಲ್ಲೇ ಇರುವ ಭಾರತ ತಂಡದ ಆಟಗಾರರು, ಟ್ರೆಕ್ಕಿಂಗ್ ಸೇರಿದಂತೆ ವಿವಿಧ ಅಭ್ಯಾಸಗಳಲ್ಲಿ ಪಾಲ್ಗೊಂಡು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ, ಇಂದು (ಅಕ್ಟೋಬರ್ 25) ಲಕ್ನೋಗೆ ಪ್ರಯಾಣಿಸುವ ಸಾಧ್ಯತೆ ಇದೆ.
ಸೂರ್ಯಕುಮಾರ್ ಯಾದವ್‌ಗೆ ಅವಕಾಶ
ಪಾಂಡ್ಯ ಅಲಭ್ಯತೆಯಲ್ಲೂ ಭಾರತ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವ ಮೂಲಕ ಮುಂದಿನ ಪಂದ್ಯಗಳಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೂಡ ಸೂರ್ಯಕುಮಾರ್ ಯಾದವ್ ಅವರು ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದರು.












Click it and Unblock the Notifications