India vs New Zealand: ಅಂತ ಕೆಲಸ ಮಾಡಬೇಡಿ ಪ್ಲೀಸ್! ರೋಹಿತ್ - ವಿರಾಟ್ ಕೊಹ್ಲಿಗೆ ಫ್ಯಾನ್ಸ್ ವಿಶೇಷ ಬೇಡಿಕೆ
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ. ರೋಚಕ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಂತ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ 49 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 254 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಭಾರತದ ಆಟಗಾರರು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಭಾರತದ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ನಲ್ಲೇ ದಾಂಡಿಯಾ ನೃತ್ಯ ಮಾಡುವ ಮೂಲಕ ಗಮನ ಸಂಭ್ರಮಿಸಿದರು. ಇಬ್ಬರ ನಡುವಿನ ಗೆಳೆತನಕ್ಕೆ ಇದು ಸಾಕ್ಷಿಯಾಗಿತ್ತು.
ಅಭಿಮಾನಿಗಳಿಗೆ ಕಾಡುತ್ತಿದೆ ಆತಂಕ!
2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಹಲವು ಆಟಗಾರರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಎಲ್ಲಿ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುತ್ತಾರೋ ಎನ್ನುವ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.
ಅಭಿಮಾನಿಗಳ ವಿಶೇಷ ಮನವಿ
ಭಾರತ ತಂಡದ ಅಭಿಮಾನಿಗಳಿಗೆ ಇನ್ನಷ್ಟು ವರ್ಷ ರೋ-ಕೋ ಜೋಡಿಯನ್ನು ಮೈದಾನದಲ್ಲಿ ನೋಡುವ ಆಸೆ ಇದೆ. ಇಬ್ಬರೂ ಈಗಲೇ ವಿದಾಯ ಹೇಳಬಾರದು ಎಂದು ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದಾರೆ.
2027ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಇಬ್ಬರೂ ಕೂಡ ಈ ಪಂದ್ಯಾವಳಿಯಲ್ಲಿ ಆಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ವಿದಾಯ ಹೇಳುವುದಾದರೆ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ವಿದಾಯ ಹೇಳಲಿ, ಇನ್ನೆರಡು ವರ್ಷ ಆಡಲೇಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ವಿರಾಟ್ ಕೊಹ್ಲಿಗೆ ಈಗ 36 ವರ್ಷ, ರೋಹಿತ್ ಶರ್ಮಾಗೆ 37 ವರ್ಷ. ಇನ್ನೆರಡು ವರ್ಷ ಇಬ್ಬರೂ ಏಕದಿನ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ವಿರಾಟ್ ಕೊಹ್ಲಿ ಇನ್ನೂ ಫಿಟ್ ಆಗಿದ್ದು ಇನ್ನೂ ಎರಡು ಮೂರು ವರ್ಷ ಕ್ರಿಕೆಟ್ ಆಡಬಹುದು. ಆದರೆ ಯುವಕರಿಗೆ ಅವಕಾಶ ನೀಡಬೇಕು ಎಂದು ರೋಹಿತ್, ಕೊಹ್ಲಿ ನಿರ್ಧರಿಸಿದರೆ ಯಾವುದೇ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ.












Click it and Unblock the Notifications