Team India: ಭಾರತ ತಂಡದ ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ
2024-25ರ ಸಾಲಿನ ಟೀಂ ಇಂಡಿಯಾದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ತವರಿನಲ್ಲಿ ಇನ್ನೊಂದು ವರ್ಷ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ ಇದಾಗಿದೆ.
ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಭಾರತಕ್ಕೆ ಪ್ರಯಾಣ ಮಾಡಲಿದ್ದು, ಸರಣಿಗಳನ್ನು ಆಡಲಿವೆ. ಟಿ20 ವಿಶ್ವಕಪ್ ಬಳಿಕವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಂತರವಾಗಿ ಕ್ರಿಕೆಟ್ ರಸದೌತಣ ಸಿಗಲಿದೆ.

ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ಋತುವು ಪ್ರಾರಂಭಗೊಳ್ಳುತ್ತದೆ. ಸೆಪ್ಟೆಂಬರ್ 19 ರಂದು ಪ್ರಾರಂಭವಾಗುವ ಮೊದಲ ಟೆಸ್ಟ್‌ಗೆ ಚೆನ್ನೈ ಆತಿಥ್ಯ ವಹಿಸಲಿದೆ, ನಂತರ ಕಾನ್ಪುರ ಎರಡನೇ ಟೆಸ್ಟ್ ಅನ್ನು ಸೆಪ್ಟೆಂಬರ್ 27 ರಿಂದ ಆಯೋಜಿಸುತ್ತದೆ.
ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಧರ್ಮಶಾಲಾ, ದೆಹಲಿ ಮತ್ತು ಹೈದರಾಬಾದ್ ಕ್ರಮವಾಗಿ ಅಕ್ಟೋಬರ್ 6, 9 ಮತ್ತು 12 ರಂದು ಪಂದ್ಯಗಳನ್ನು ಆಯೋಜಿಸಲಿದೆ.
ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ
ಅಕ್ಟೋಬರ್ ತಿಂಗಳಿನಲ್ಲಿ ಮತ್ತೊಂದು ರೋಚಕ ಟೆಸ್ಟ್ ಸರಣಿಯನ್ನು ನೋಡಬಹುದು. ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16 ರಂದು ಬೆಂಗಳೂರಿನಲ್ಲಿ ಆರಂಭವಾಗುತ್ತದೆ, ನಂತರ ಪುಣೆ ಮತ್ತು ಮುಂಬೈನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳು ನಡೆಯಲಿವೆ.
ಮೂರು ಏಕದಿನ ಪಂದ್ಯಗಳು
ತವರಿನಲ್ಲಿ ಈ ಬಾರಿ ಕೇವಲ ಮೂರು ಏಕದಿನ ಪಂದ್ಯಗಳು ಮಾತ್ರ ನಡೆಯಲಿವೆ. 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಹೊಂದಿಸಲಾಗಿದೆ.
ಬಲಿಷ್ಠ ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಟಿ20 ಸರಣಿಗಾಗಿ ಭಾರತಕ್ಕೆ ಭೇಟಿ ನೀಡಲಿದೆ, 2025 ರ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದೆಲ್ಲಾ ಭಾರತದಲ್ಲಿ ನಡೆಯುವ ಪಂದ್ಯಗಳ ವೇಳಾಪಟ್ಟಿಯಾಗಿದೆ.
ಆಸ್ಟ್ರೇಲಿಯಾ ಪ್ರವಾಸ
ಇನ್ನು ಸಾಕಷ್ಟು ನಿರೀಕ್ಷೆ ಹೊಂದಿರುವ ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದೆ. ನವೆಂಬರ್ 22 ರಿಂದ ಜನವರಿ 3 ರವರೆಗೆ ಐದು ಟೆಸ್ಟ್‌ಗಳ ಸರಣಿ ನಡೆಯಲಿದ್ದು, ಭಾರತ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಲಿದೆ.
ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಸದ್ಯ ಮೊದಲ ಸ್ಥಾನದಲ್ಲಿದ್ದು, ಸತತ ಮೂರನೇ ಬಾರಿ ಫೈನಲ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ. 9 ಟೆಸ್ಟ್ ಪಂದ್ಯಗಳಲ್ಲಿ ಭಾರತ 6 ಪಂದ್ಯಗಳಲ್ಲಿ ಗೆದ್ದಿದ್ದು, 2 ಪಂದ್ಯಗಳನ್ನು ಸೋತಿದೆ. ಒಂದು ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ.
ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದರೆ ಭಾರತ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications