India vs England: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ: ಕನ್ನಡಿಗನಿಗೆ ಸಿಕ್ತು ಅವಕಾಶ
ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಶುಕ್ರವಾರ ಬಿಸಿಸಿಐ ತಂಡವನ್ನು ಆಯ್ಕೆ ಮಾಡಿದೆ. ಮೇ 30 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಸರಣಿಗೆ ಅಭಿಮನ್ಯು ಈಶ್ವರನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡಿಗ ಕರುಣ್ ನಾಯರ್ ಅವರಿಗೆ ಕೊನೆಗೂ ಅವಕಾಶ ಸಿಕ್ಕಿದ್ದು, ಇಂಗ್ಲೆಂಡ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಉಪನಾಯಕರಾಗಿದ್ದರು. 18 ಸದಸ್ಯರ ತಂಡದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಕೂಡ ಇದ್ದಾರೆ. ಶ್ರೇಯಸ್ ಅಯ್ಯರ್ ಅವರು ಭಾರತ ಎ ತಂಡದಲ್ಲಿ ಅವಕಾಶ ಪಡೆದಿಲ್ಲ ಆದರೆ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಕರುಣ್ ನಾಯರ್ ಅವರಿಗೆ ಅವಕಾಶ
ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಅವಕಾಶ ನೀಡಿದ್ದು ಅಚ್ಚರಿ ಎನ್ನುವಂತೆ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ. ಇದರಿಂದ ಶ್ರೇಯಸ್ ಅವರ ಟೆಸ್ಟ್ ವೃತ್ತಿಜೀವನದ ಬಗ್ಗೆ ಮತ್ತು ಇಂಗ್ಲೆಂಡ್ ಟೆಸ್ಟ್‌ಗಳಿಗೆ ಮುಖ್ಯ ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆಯೇ ಎನ್ನುವುದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆಸ್ಟ್ರೇಲಿಯಾದಲ್ಲಿ ಆಡಲು ಅವಕಾಶ ಸಿಗದ ಮತ್ತು ಬೆಂಚ್ ಕಾದಿದ್ದ ಸರ್ಫರಾಜ್ ಖಾನ್‌ಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ಆರ್. ಅಶ್ವಿನ್ ವಿದಾಯ ಘೋಷಿಸಿದ ಬಳಿಕ ಅವರ ಬದಲಾಗಿ ಅವಕಾಶ ಪಡೆದಿದ್ದ ತನುಷ್ ಕೋಟಿಯನ್ ಅವರನ್ನು ಎ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ದೇಶೀಯ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೇಲೆ ಕೆಲವು ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ಶಾರ್ದೂಲ್ ಠಾಕೂರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ 2025 ಪಂದ್ಯಾವಳಿ ಮುಕ್ತಾಯವಾದ ಬಳಿಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈ ವರ್ಷದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹರ್ಷ್ ದುಬೆ ಕೂಡ ತಂಡದಲ್ಲಿ ಅವಕಾಶ ಪಡೆದರು. ವಿದರ್ಭ ಸ್ಪಿನ್ನರ್ 10 ಪಂದ್ಯಗಳಲ್ಲಿ ಕೇವಲ 17 ರ ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಗಳಿಸಿದ್ದರು. ಮತ್ತೊಬ್ಬ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಕರುಣ್ ನಾಯರ್ ಅವರಿಗೆ ಕೊನೆಗೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ಬಳಿಕ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ, ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಿ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ: ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ಮಾನವ್ ಸುತಾರ್, ತನುಷ್ ಕೋಟ್ಯಾನ್, ಮುಖೇಶ್ ಕುಮಾರ್, ಆಕಾಶ್ ದೀಪ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಖಲೀಲ್ ಕಾಂಬೋಜ್, ಖಲೀಲ್ ಅಹ್ಮದ್, ಸರ್ಫಾರಾಜ್ ಖಾನ್ ದೇಶಪಾಂಡೆ, ಹರ್ಷ ದುಬೆ.
ಮೊದಲ ಪಂದ್ಯದ ನಂತರ ಶುಭಮನ್ ಗಿಲ್, ಸಾಯಿ ಸುದರ್ಶನ್ ತಂಡವನ್ನು ಸೇರಲಿದ್ದಾರೆ.












Click it and Unblock the Notifications