ಶಿವಮೊಗ್ಗ; ಬಾಳೆ, ಅಡಕೆ ಬೆಳೆ ನಾಶ ಮಾಡಿದ ಕಾಡಾನೆಗಳು
ಶಿವಮೊಗ್ಗ, ಜೂನ್ 27; ಲಕ್ಕಿನಕೊಪ್ಪದಲ್ಲಿ ಕಾಡಾನೆಗಳು ದಾಳಿ ಮಾಡಿ ಬೆಳೆ ನಷ್ಟ ಉಂಟು ಮಾಡಿವೆ. ಬಾಳೆ, ಅಡಕೆ ಮರಗಳನ್ನು ಕಳೆದುಕೊಂಡು ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಲಕ್ಕಿನಕೊಪ್ಪದ ತೋಟ, ಗದ್ದೆಗಳ ಮೇಲೆ ಶನಿವಾರ ತಡ ರಾತ್ರಿ ಆನೆಗಳು ದಾಳಿ ಮಾಡಿವೆ. ಬಾಳೆ ಗಿಡ, ಅಡಕೆ ಮರಗಳು ಬುಡಮೇಲಾಗಿವೆ. ಆನೆಗಳ ದಾಳಿಯಿಂದಾಗಿ ಲಕ್ಕಿನಕೊಪ್ಪ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ನಿರ್ಲಕ್ಷ ತೋರಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆನೆ ದಾಳಿ ಸುದ್ದಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಬಂದರು.
"ಆನೆಗಳು ಇದು ನಾಲ್ಕನೇ ಬಾರಿಗೆ ನನ್ನ ತೋಟದ ಮೇಲೆ ದಾಳಿ ಮಾಡಿವೆ. ಬಾಳೆ, ಅಡಕೆ ಬೆಳೆದಿದ್ದೀನಿ. ಈಗ ಆನೆಗಳಿಂದಾಗಿ ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋಗುತ್ತಾರೆ ಬಿಟ್ಟರೆ, ಮತ್ತಿನ್ನೇನನ್ನೂ ಮಾಡುವುದಿಲ್ಲ" ಎಂದು ರೈತ ಅರುಣ್ ಆರೋಪಿಸಿದರು.

ಅಧಿಕಾರಿಗಳು ಸ್ಥಳಕ್ಕೆ ದೌಡು; ಆನೆ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ದಾಳಿ ಮತ್ತು ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಭದ್ರಾ ಅಭಯಾರಣ್ಯದಿಂದ ಆನೆಗಳು ಈ ಭಾಗಕ್ಕೆ ಬಂದಿವೆ. ಭದ್ರಾ ಹಿನ್ನೀರು ದಾಟಿ ಮಾರಿದಿಬ್ಬದ ಕಡೆಯಿಂದ ಬಂದಿರುವ ಆನೆಗಳು, ಉಂಬ್ಳೆಬೈಲು ಅರಣ್ಯ ವಲಯ ವ್ಯಾಪ್ತಿಯ ಹಳ್ಳಿಗಳಲ್ಲಿ ದಾಳಿ ಮಾಡುತ್ತಿವೆ. ಕಾಕನ ಹಸೂಡಿ, ಉಂಬ್ಳೆಬೈಲು, ಲಕ್ಕಿನಕೊಪ್ಪದ ವಿವಿಧೆಡೆ ನಿರಂತರ ಸಂಚರಿಸುತ್ತಿವೆ. ಇದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ಶಂಕರಘಟ್ಟ ಬಳಿ ಪ್ರತ್ಯಕ್ಷ; ಕಳೆದ ವಾರ ಆನೆಯೊಂದು ಶಂಕರಘಟ್ಟ ಸಮೀಪದ ಗೋಣಿಬೀಡು ಗ್ರಾಮದ ಬಳಿ ಪ್ರತ್ಯಕ್ಷವಾಗಿತ್ತು. ಅರಣ್ಯ ವ್ಯಾಪ್ತಿಯಿಂದ ಗ್ರಾಮದ ವ್ಯಾಪ್ತಿಗೆ ಬರಲು ಆನೆ ಪ್ರಯತ್ನಿಸಿತ್ತು. ಆದರೆ ಅರಣ್ಯ ಇಲಾಖೆಯ ಟ್ರೆಂಚ್‍ನಿಂದಾಗಿ, ಆನೆ ಅದನ್ನು ದಾಟಲಾಗದೆ ನಿಂತಿತ್ತು. ಸ್ಥಳಕ್ಕೆ ಬಂದಿದ್ದ ಅರಣ್ಯಾಧಿಕಾರಿಗಳು ಪಟಾಕಿ ಹೊಡೆದು ಆನೆಯನ್ನು ಕಾಡಿಗಟ್ಟಿದ್ದರು.
ಉಂಬ್ಳೆಬೈಲು ವಲಯ ವ್ಯಾಪ್ತಿಯ ಗ್ರಾಮಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳ ಉಪಟಳ ತಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಸಾಕಾನೆಗಳನ್ನು ಕರೆತಂದು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸುವ ಪ್ರಯತ್ನವಾಗಿತ್ತು.
ಆನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಕಾಡಾನೆಗಳು ಪುನಃ ಪ್ರತ್ಯಕ್ಷವಾಗಿದ್ದು, ತೋಟ, ಗದ್ದೆಗಳ ಮೇಲೆ ದಾಳಿ ಮಾಡುತ್ತಿವೆ. ಈಗ ಗ್ರಾಮಸ್ಥರು ಆತಂಕ ಮತ್ತು ಆಕ್ರೋಶಗೊಂಡಿದ್ದಾರೆ.












Click it and Unblock the Notifications