ಹೊಸಗುಂದದಲ್ಲೊಂದು ವಿಶಿಷ್ಟ ವನಮಹೋತ್ಸವ, ಹಲಸು ಗಿಡಗಳ ವಿತರಣೆ
ಶಿವಮೊಗ್ಗ, ಜೂನ್ 20 : ರೈತರ ಸಬಲೀಕರಣ, ಊರಿಗೆ ಹಸಿರ ತೋರಣ. ಈ ಎರಡು ಧ್ಯೇಯೋದ್ದೇಶದೊಂದಿಗೆ ಐತಿಹಾಸಿಕ ಹೊಸಗುಂದ ಹಳ್ಳಿಯಲ್ಲಿ ಜೂನ್ 22, ಶನಿವಾರದಂದು ವಿಶಿಷ್ಟ ವನಮಹೋತ್ಸವ ನಡೆಯಲಿದೆ.
ಸಾಗರದಿಂದ 12 ಕೀಲೋಮೀಟರ್ ದೂರದಲ್ಲಿರುವ ಈ ಐತಿಹಾಸಿಕ ಶ್ರೀ ಉಮಾಮಹೇಶ್ವರ ದೇಗುಲದ ಸನಿಹ, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್, ಹೊಸಗುಂದ ಇದರ ವತಿಯಿಂದ 15 ಸಾವಿರ ಹಲಸಿನ ಹಣ್ಣಿನ ಗಿಡಗಳನ್ನು ವನಮಹೋತ್ಸವದ ಅಂಗವಾಗಿ ಆಸಕ್ತ ರೈತರಿಗೆ ವಿತರಿಸಲಾಗುವುದು.
ಮೇಣ ರಹಿತ, ವರ್ಷವಿಡೀ ಫಲ ನೀಡುವ ಹಾಗೂ ಕೆಂಪು ಸೊಳೆಯ ತಲಾ ಐದು ಸಾವಿರ ಹಲಸಿನ ಗಿಡಗಳನ್ನು ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿಸಿ ತಮ್ಮಣ್ಣ ವಿತರಿಸಲಿದ್ದಾರೆ.

ಗುರುಸೇವಾ ಧುರೀಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಹೊಸಗುಂದದ ಅಧ್ಯಕ್ಷರೂ ಆದ ವಿ ಆರ್ ಗೌರಿ ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಸಂಸದ ಬಿಎಸ್ ಯಡಿಯೂರಪ್ಪ, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಹೊಸಗುಂದದ ಸ್ಥಾಪಕ ಟ್ರಸ್ಟಿಗಳಾದ ಸಿಎಂ ನಾರಾಯಣ ಶಾಸ್ತ್ರಿ, ಶೋಭಾ ಎನ್ ಶಾಸ್ತ್ರಿ ಇನ್ನಿತರ ಮುಖಂಡರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವನಮಹೋತ್ಸವ ಕಾರ್ಯಕ್ರಮವನ್ನು ವಿಶಿಷ್ಟವಾಗಿಸಿರುವುದು15 ಸಾವಿರ ಹಲಸಿನ ಗಿಡಗಳ ವಿತರಣೆ. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಹೊಸಗುಂದದ ಸ್ಥಾಪಕ ಟ್ರಸ್ಟಿಗಳಾದ ಸಿಎಂ ನಾರಾಯಣ ಶಾಸ್ತ್ರಿ ಪ್ರಕಾರ, ಹಲಸಿನ ಹಣ್ಣು ಗಿಡದ ವಿತರಣೆಗೆ ಹಲವು ನಿರ್ದಿಷ್ಟ ಕಾರಣಗಳಿವೆ.
"ಸಸ್ಯಾಹಾರಕ್ಕೆ ಮರಳೋಣ ಎಂಬ ಚಳವಳಿ ಜಗತ್ತಿನಾದ್ಯಂತ ಬಲಗೊಳ್ಳುತ್ತಿದೆ. ಈ ಚಳವಳಿ ಹಿನ್ನೆಲೆಯಲ್ಲಿ ಹಲಸಿನ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಇದರಿಂದಾಗಿ ರೈತರ ಆರ್ಥಿಕತೆ ಹಲಸು ಬೆಳೆದರೆ ಉತ್ತಮಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಜತೆಗೆ 3-4 ವರ್ಷಗಳಲ್ಲಿ ಈ ಹಲಸಿನ ಗಿಡಗಳು ಫಲ ನೀಡಲಾರಂಭಿಸುತ್ತವೆ. ಅವುಗಳ ಪಾಲನೆ ವೆಚ್ಚ ಏನಿಲ್ಲ. ಹೀಗಾಗಿ ಲಾಭಾಂಶ ಹೆಚ್ಚು. ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಇದು ಪೂರಕವಾಗಿದೆ" ಎನ್ನುತ್ತಾರೆ ಶಾಸ್ತ್ರಿಗಳು.

"ಹಲಸಿನ ಹಣ್ಣು ಪರಿಸರಕ್ಕೆ ಪೂರಕವಾದುದು. ಹಲಸಿನ ಹಣ್ಣಿನ ಉಪ ಉತ್ಪನ್ನಗಳಿಗೆ ಎಲ್ಲಾ ಕಡೆ ಈಗ ಬೇಡಿಕೆ ಇದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾವು 15 ಸಾವಿರ ಹಲಸಿನ ಹಣ್ಣಿನ ಗಿಡ ವಿತರಿಸುತ್ತಿದ್ದೇವೆ" ಎನ್ನುತ್ತಾರೆ ಶಾಸ್ತ್ರಿಗಳು.
ಈ ಕಾರ್ಯಕ್ರಮದ ಅಂಗವಾಗಿ ಮಳೆ ನೀರು ಕೊಯ್ಲು ಗುಂಡಿಗಳ ರಿಪೇರಿ ಮತ್ತು ಶುಚಿಗೊಳಿಸುವ ಕಾರ್ಯಕ್ರಮ ಕೂಡಾ ನಡೆಯಲಿದೆ. ಇದೇ ಮೇ 1 ಮತ್ತು 2ರಂದು ಉಮಾಮಹೇಶ್ವರ ಹಾಗೂ ಅವರ ಕುಟುಂಬ ದೇವರ ಕುಂಭಾಭಿಷೇಕ ಹಾಗೂ ಪುನ: ಪ್ರತಿಷ್ಠಾಪನೆ ಹೊಸಗುಂದದಲ್ಲಿ ನಡೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಶೃಂಗೇರಿ ಶಂಕರ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥರ ಶುಭಾಶೀರ್ವಾದದೊಂದಿಗೆ ಅವರ ಕರ ಕಮಲ ಸಂಜಾತ ಜಗದ್ಗುರು ಶ್ರೀ ಶ್ರೀ ಶ್ರೀ ವಿಧು ಶೇಖರ ಭಾರತೀ ತೀರ್ಥರ ಕಮಲ ಹಸ್ತದಿಂದ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.












Click it and Unblock the Notifications