ಉಡಾನ್ ಯೋಜನೆ; ಶಿವಮೊಗ್ಗದಿಂದ ಮೂರು ನಗರಕ್ಕೆ ವಿಮಾನ ಹಾರಾಟ
ಶಿವಮೊಗ್ಗ, ಜೂನ್ 28; ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡು ಉದ್ಘಾಟನೆಯೂ ಆಗಿದೆ. ಆದರೆ ಇನ್ನೂ ವಿಮಾನಗಳ ವಾಣಿಜ್ಯ ಸಂಚಾರ ಆರಂಭವಾಗಿಲ್ಲ. ಆಗಸ್ಟ್‌ನಲ್ಲಿ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸಂಚಾರ ಆರಂಭವಾಗಲಿದೆ. ಈಗ ಉಡಾನ್ ಯೋಜನೆಯಡಿ ಶಿವಮೊಗ್ಗಕ್ಕೆ ಮತ್ತೆ ಮೂರು ವಿಮಾನಗಳು ಸಿಕ್ಕಿವೆ.
ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಇಲ್ಲಿಯ ತನಕ ಪ್ರಯಾಣಿಕ ವಿಮಾನಗಳ ಸಂಚಾರ ಆರಂಭವಾಗಿಲ್ಲ. ನರೇಂದ್ರ ಮೋದಿ, ರಾಹುಲ್ ಗಾಂಧಿ, ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರ ವಿಶೇಷ ವಿಮಾನಗಳು ಮಾತ್ರ ಆಗಮಿಸಿವೆ.

ಇಂಡಿಗೋ ಸಂಸ್ಥೆ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸಂಚಾರಕ್ಕೆ ಈಗಾಗಲೇ ಒಪ್ಪಿಗೆ ನೀಡಿದೆ. ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹಾರಾಟ ಆರಂಭವಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹಾರಾಡುವ ಮೊದಲ ವಿಮಾನ ಇದಾಗಿದೆ. ಈ ಮೂಲಕ ಲೋಕಾರ್ಪಣೆಗೊಂಡ ಬಳಿಕ ವಿಮಾನ ನಿಲ್ದಾಣ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗುತ್ತಿದೆ.
ಮೂರು ಹೊಸ ಮಾರ್ಗಗಳು; ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಉಡಾನ್ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಉಡಾನ್ ಯೋಜನೆ 5.0ಗೆ ವಿಮಾನ ನಿಲ್ದಾಣ ಸೇರಿದೆ. ಇದರಿಂದಾಗಿ ಮೂರು ಹೊಸ ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ.
ಶಿವಮೊಗ್ಗ-ಗೋವಾ, ಶಿವಮೊಗ್ಗ-ಹೈದರಾಬಾದ್ ಮತ್ತು ಶಿವಮೊಗ್ಗ-ತಿರುಪತಿ ನಡುವೆ ವಿಮಾನ ಸಂಚಾರ ಉಡಾನ್ ಯೋಜನೆಯಡಿ ಆರಂಭವಾಗಲಿದೆ. ಆದರೆ ಈ ವಿಮಾನ ಸೇವೆಗಳ ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮೂರು ಮಾರ್ಗದಲ್ಲಿ ವಿಮಾನ ಹಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೂರು ಹೊಸ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ಸಿಕ್ಕಿರುವ ಕುರಿತು ರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣವಾಗುವ ಹಂತದಲ್ಲಿಯೇ ಒಟ್ಟು 8ಕ್ಕೂ ಅಧಿಕ ಮಾರ್ಗಕ್ಕಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಈಗ ಬೆಂಗಳೂರು-ಶಿವಮೊಗ್ಗ ಸೇರಿದಂತೆ ಒಟ್ಟು 4 ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕಿದೆ.
ಆಗಸ್ಟ್ 11ರಿಂದ ಇಂಡಿಗೋ ವಿಮಾನದ ಹಾರಾಟ ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ 9ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಟು 1.30ಕ್ಕೆ ವಿಮಾನ ಬೆಂಗಳೂರು ತಲುಪಲಿದೆ.
ಯಡಿಯೂರಪ್ಪ ಕನಸು; ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು. ಸೊಗಾನೆಯ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು 2022ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇತ್ತು. ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿ 2023ರ ಫೆಬ್ರವರಿಗೆ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತು. ಆದರೆ ವಾಣಿಜ್ಯ ವಿಮಾನಗಳ ಹಾರಾಟ ಇನ್ನೂ ಆರಂಭವಾಗಿಲ್ಲ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ 3200 ಮೀಟರ್ ಉದ್ದದ ರನ್ ವೇ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ 2ನೇ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣದಿಂದ ವಾಣಿಜ್ಯ ಸಂಚಾರ ಆರಂಭವಾದರೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.












Click it and Unblock the Notifications