ಸಾಗರ; ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ್ದ 8 ಕಳ್ಳರ ಬಂಧನ
ಶಿವಮೊಗ್ಗ, ಜೂನ್ 7: ಸಾಗರ ತಾಲೂಕಿನ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತರು ಪಾಲಿಗೆ ಕಂಟಕಪ್ರಾಯವಾಗಿದ್ದ ಬಂಧಿತರಿಂದ 5 ಲಕ್ಷ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಸಾಗರ ತಾಲೂಕಿನ ವಿವಿಧೆಡೆ ಈ ಕಳ್ಳರು ಅಡಿಕೆ ಕಳ್ಳತನ ಮಾಡುತ್ತಿದ್ದ 8 ಕಳ್ಳರನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇದರಿಂದ 7 ಕಳ್ಳತನ ಪ್ರಕರಣವನ್ನು ಭೇದಿಸಿದಂತಾಗಿದೆ.
ಮೇ 31ರ ರಾತ್ರಿ ಸಾಗರ ತಾಲೂಕು ದೊಂಬೆ ಗ್ರಾಮದಲ್ಲಿ ಅಡಿಕೆ ಕಳ್ಳತನವಾಗಿತ್ತು. ಗಜಾನನ ಎಂಬುವವರು ತಮ್ಮ ಮನೆ ಸಮೀಪದ ಗೋಡೋನ್‌ನಲ್ಲಿ 2.40 ಲಕ್ಷ ರೂ. ಮೌಲ್ಯದ ಅಡಕೆಯನ್ನು ಸಂಗ್ರಹಿಸಿಟ್ಟಿದ್ದರು. ರಾತ್ರೋರಾತ್ರಿ ಗೋಡೋನ್‌ಗೆ ನುಗ್ಗಿದ ಖದೀಮರು ಅಡಿಕೆಯನ್ನು ಕದ್ದೊಯ್ದಿದ್ದರು. ಕೆಂಪು ಅಡಿಕೆ, ಬಿಳಿ ಗೋಟು, ಕಲವಾರು ಅಡಿಕೆ, ಹಂಡೆಬೆಟ್ಟೆ ಮಾದರಿಯ ಸುಮಾರು 675 ಕೆ.ಜಿ ಅಡಕೆ ಕಳ್ಳತನವಾಗಿದೆ ಎಂದು ಗಜಾನನ ದೂರು ನೀಡಿದ್ದರು.

ಸಿಕ್ಕಿಬಿದ್ದರು ಎಂಟು ಕಳ್ಳರು; ಈ ಪಕ್ರರಣದ ತನಿಖೆ ನಡೆಸಿದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇವರು ಸಾಗರ ತಾಲೂಕಿನ ವಿವಿಧೆಡೆ ಅಡಿಕೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನು, ಕೃತ್ಯಕ್ಕೆ ಬಳಕೆ ಮಾಡಿದ ಮಾರುತಿ ಓಮ್ನಿ ಕಾರು, ಎರಡು ಬೈಕುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳ ಬಂಧನದಿಂದ ಸಾಗರ ತಾಲೂಕಿನ ಏಳು ಕಡೆ ಅಡಕೆ ಕಳವು ಪ್ರಕರಣವನ್ನು ಭೇದಿಸಿದಂತಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಧಿತರೆಲ್ಲ ಸಾಗರ ತಾಲೂಕಿನವರೆ ಆಗಿದ್ದಾರೆ. ಯಶೋಧರ (23), ಮಂಜುನಾಥ (28), ಅರುಣ (27), ಸಂದೇಶ (22), ಸಾಗರ ಪಟ್ಟಣದ ಶಶಾಂತ್ (21), ಕಾರ್ತಿಕ್ (20), ಅದರಂತೆ ಗ್ರಾಮದ ಸಂದೀಪ (24), ಅಣಲೆಕೊಪ್ಪದ ಶಾರೂಕ್ ಅಲಿ (24)ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications