ಜೋಗ ಜಲಪಾತ ವೀಕ್ಷಣೆ ಮತ್ತಷ್ಟು ಸುಲಭ!

ಬ್ರಿಟಿಷ್ ಬಂಗ್ಗೆ ಪಕ್ಕದಲ್ಲಿ ಅರಣ್ಯ ಇಲಾಖೆ ರೂ 4.65 ಕೋಟಿ ಕಾಂಟಿಲಿವರ್ ನಿರ್ಮಾಣ ಮಾಡಲು ಮುಂದಾಗಿದೆ. ಮೊದಲನೇ ಹಂತದಲ್ಲಿ ಯೋಜನೆಗೆ 1.5 ಕೋಟಿ ರೂ. ವೆಚ್ಚ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ದಕ್ಷಿಣ ಭಾರತದಲ್ಲೇ ವೀಕ್ಷಣಾ ಸ್ಥಳ (ಕಾಂಟಿಲಿವರ್) ಯೋಜನೆ ಬಹಳ ಅಪರೂಪವಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಯೋಜನೆಯ ಟೆಂಡರ್ ಪಡೆದಿದ್ದು, ಕಾಮಗಾರಿ ಕೈಗೊಳ್ಳಲಿದೆ.
ಹೇಗಿರುತ್ತದೆ ಕಾಂಟಿಲಿವರ್ : ಭದ್ರವಾದ ಕಂಬಗಳನ್ನು ಆಧರಿಸಿ ಗುಡ್ಡದ ತುದಿಯಲ್ಲಿ ಉಕ್ಕಿನ ಕಾಂಟಿಲಿವರ್ ನಿರ್ಮಾಣ ಮಾಡಲಾಗುತ್ತದೆ. ಯಂತ್ರ ಆಧಾರಿತ ಇದರ ಮುಂಭಾಗ ನೆಲದಿಂದ ಸುಮಾರು 40 ಅಡಿ ಮುಂದಕ್ಕೆ ಹೋಗಿ ನಿಲ್ಲುತ್ತದೆ.
ಕಾಂಟಿಲಿಲವರ್ ಕಂಬದ ಬಳಿಯ ಗೋಪುರ ಮೂರು ಅಂತಸ್ತುಗಳನ್ನು ಹೊಂದಿದ್ದು ಅದರ ಮೇಲಿನಿಂದಲೂ ಸಹ ಜೋಗ ಜಲಪಾತದ ವೈಭವವನ್ನು ಪ್ರವಾಸಿಗರು ಸವಿಯಬಹುದಾಗಿದೆ. ಈ ಯೋಜನೆಯಿಂದ ಜೋಗ ಜಲಪಾತ ವೀಕ್ಷಿಸುವುದು ಮತ್ತಷ್ಟು ಸುಲಭವಾಗಲಿದೆ.
ಕಾಂಟಿಲಿವರ್ ಪ್ಲಾಟ್‌ಫಾರ್ಮ್ ಮೇಲೆ ನಿಂತರೆ ಎಡಭಾಗದಲ್ಲಿ ಜೋಗ ಜಲಪಾತದ ಪ್ರಪಾತ, ಕೆಳಗೆ ಶರಾವತಿ ಕಣಿವೆ ಹಾಗೂ ಸುತ್ತಲಿನ ನಿತ್ಯಹರಿದ್ವರ್ಣ ಕಾಡನ್ನು ವೀಕ್ಷಿಸಲು ಅವಕಾಶ ದೊರೆಯುತ್ತದೆ. ಗುಡ್ಡದ ತುದಿಯಲ್ಲಿ ವೀಕ್ಷಣಾ ಸ್ಥಳ ನಿರ್ಮಾಣ ಜಾಗದ ಮಣ್ಣು ಪರೀಕ್ಷೆ ನಡೆಸಲಾಗಿದ್ದು, ಸಕಾರಾತ್ಮಕ ಫಲಿತಾಂಶ ದೊರಕಿದೆ.
ಮುಂದಿನ ತಿಂಗಳ ವೇಳೆಗೆ ಕಾಂಟಿಲಿವರ್ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, 2014ರ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರಿಗೆ ಜಲಪಾತ ವೀಕ್ಷಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.












Click it and Unblock the Notifications