ಶಿವಮೊಗ್ಗ; ಸಚಿವರ ಗಮನ ಸೆಳೆದ ಸಿಮ್ಸ್ ಖಾಲಿ ಹುದ್ದೆಗಳು
ಶಿವಮೊಗ್ಗ, ನವೆಂಬರ್ 13; ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ನಲ್ಲಿನ ಖಾಲಿ ಹುದ್ದೆಗಳ ವಿಚಾರ ಸಚಿವರ ಗಮನ ಸೆಳೆದಿದೆ. ಸಂಸ್ಥೆಗೆ ಅಗತ್ಯವಾದ ಮೂಲಭೂತ ಸೌಕರ್ಯ, ಹುದ್ದೆ ಭರ್ತಿ, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸಿಮ್ಸ್‌ನಲ್ಲಿ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಸಿಮ್ಸ್ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್, "ಮುಖ್ಯ ಆಸ್ಪತ್ರೆ 791, ಓಬಿಜಿ 304, ಪಿಡೀಯಾಟ್ರಿಕ್ 120 ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 299 ಹಾಸಿಗೆ ಸೇರಿದಂತೆ ಒಟ್ಟು 1514 ಹಾಸಿಗೆ ಸಾಮರ್ಥ್ಯ ಹೊಂದಿದೆ. ಇದರಲ್ಲಿ 1302 ಆಕ್ಸಿಜನ್ ಬೆಡ್, 128 ಐಸಿಯು ಮತ್ತು 110 ಹೆಡಿಯು ಇದೆ" ಎಂದು ಮಾಹಿತಿ ನೀಡಿದರು.
"ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಒಟ್ಟು 333 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು ಇನ್ನೂ 100 ಶುಶ್ರೂಷಕರ ಅವಶ್ಯಕತೆ ಇದೆ. ಗ್ರೂಪ್ ಎಬಿಸಿಡಿ ಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಗ್ರೂಪ್ 'ಸಿ' ಮತ್ತು 'ಡಿ' ನೌಕರರ ವಸತಿ ನಿಲಯಗಳ ಕೊರತೆ ಇದೆ. ಹಾಗೂ ಹೆಚ್ಚುವರಿ ಇಟಿಪಿ ಅವಶ್ಯಕತೆ ಇದೆ" ಎಂದು ಸಚಿವರಿಗೆ ವಿವರಣೆ ಕೊಟ್ಟರು.
ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, "ಸಂಸ್ಥೆಯ ಅಭಿವೃದ್ದಿಗೆ ಪೂರಕವಾಗಿ ಅಧಿಕಾರಿ/ ಸಿಬ್ಬಂದಿ ಕಾರ್ಯ ನಿರ್ವಹಿಸಿ. ರೇಡಿಯೋಲಜಿಸ್ಟ್ ಹುದ್ದೆಗೆ ಅರ್ಜಿ ಕರೆದು ನೇಮಕ ಮಾಡಬೇಕು. ಪಿಜಿ ನರ್ಸಿಂಗ್ ವಿದ್ಯಾರ್ಥಿನಿಲಯಕ್ಕೆ ಪ್ರಸ್ತಾವನೆ ಕಳುಹಿಸಿ, ಆಸ್ಪತ್ರೆಯಲ್ಲಿ ಆಂಕೋಸರ್ಜನ್, ನ್ಯೂರೋಸರ್ಜನ್, ನ್ಯೂರಾಲಜಿಸ್ಟ್‍ಗಳಿದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೇಮಕ ಮಾಡಿಕೊಂಡು ಸೇವೆ ಒದಗಿಸಬೇಕು" ಎಂದು ತಿಳಿಸಿದರು.
"ಖಾಲಿ ಹುದ್ದೆಗಳ ಭರ್ತಿಗೆ ಡಿಪಿಸಿ ಸಿದ್ದಪಡಿಸಿ ಭರ್ತಿಗೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ಡಿಸಿ ಹಾಗೂ ಸಿಇಓ ಅರ್ಜಿ ಆಹ್ವಾನಿಸಿ ತುಂಬಬೇಕು. ಮಲೆನಾಡಿನ ಹಲವು ಪಿಹೆಚ್‍ಸಿಗಳಲ್ಲಿ ವೈದ್ಯರಿಲ್ಲ. ತುಮರಿ, ಬ್ಯಾಕೋಡು ಸೇರಿದಂತೆ ಸಾಗರದ ಮೂರು ಪಿಹೆಚ್‍ಸಿ ಯಲ್ಲಿ ವೈದ್ಯರಿಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದ್ದು, ಇಲ್ಲಿಗೆ ವೈದ್ಯರನ್ನು ನೇಮಿಸಲು ಕ್ರಮ ವಹಿಸಬೇಕು. ಹಾಗೂ ಮೆಗ್ಗಾನ್ ಆಸ್ಪತ್ರೆಯ ಖಾಲಿ ಹುದ್ದೆ ಭರ್ತಿ ಸಂಬಂಧ ಕಡತ ಸಿದ್ದಪಡಿಸಿ ಸರ್ಕಾಕ್ಕೆ ಸಲ್ಲಿಸಬೇಕು" ಎಂದು ಸೂಚನೆ ನೀಡಿದರು.
"ಸಂಸ್ಥೆಯಲ್ಲಿ ಡಿ ಗ್ರೂಪ್ ಮತ್ತು ಸ್ಕ್ಯಾವೆಂಜರ್ ನಡುವಿನ ವೇತನ ವ್ಯತ್ಯಾಸಕ್ಕೆ ಸಂಬಂಧಿಸಿಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಸಚಿವರು ಸೂಚನೆ ಕೊಟ್ಟರು. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕು. ಅವರಿಗೆ ನಿಗದಿಯಾದ ವೇತನ ಭತ್ಯೆಗಳನ್ನು ಸರಿಯಾಗಿ ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು" ಎಂದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, "ಇಡೀ ಆಸ್ಪತ್ರೆಯ ಲೆಕ್ಕಪತ್ರವನ್ನು ಉತ್ತಮವಾಗಿ ನಿರ್ವಹಿಸಬೇಕು. ಜೊತೆಗೆ ವಾರ್ಷಿಕ ಆದಾಯದ ಕುರಿತು ಗುರಿ ನಿಗದಿಪಡಿಸಿ ಅಭಿವೃದ್ದಿ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು" ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ್ ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆ ಬಳಿ ನೂತನವಾಗಿ ಆರಂಭಿಸಲಾಗುತ್ತಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಕಾಮಗಾರಿ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಿಂದ ಸುತ್ತಮುತ್ತಲಿನ ಜಿಲ್ಲೆಯ ಜನ ಸಾಮಾನ್ಯರಿಗೆ ಅತ್ಯಂತ ಉಪಯೋಗವಾಗಲಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಶೀಘ್ರದಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯಿಂದಾಗಿ ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆ ಸಿವಿಲ್ ಕಾಮಗಾರಿಗೆ ರೂ.50 ಕೋಟಿ ಮಂಜೂರಾಗಿದ್ದು, 120 ಬೆಡ್‌ನ ಆಸ್ಪತ್ರೆ ನಿರ್ಮಾಣವಾಗಲಿದೆ. ಕೀಮೊ, ರೇಡಿಯೋ ಥೆರಪಿ ಸೇರಿದಂತೆ ಅಗತ್ಯವಾದ ಎಲ್ಲ ಚಿಕಿತ್ಸೆ ಲಭ್ಯವಾಗಲಿದೆ.












Click it and Unblock the Notifications