KS Eshwarappa: ಸಿದ್ದರಾಮಯ್ಯ ಪತ್ನಿ ಮುಗ್ದ ಹೆಣ್ಣುಮಗಳು ಅನ್ಯಾಯ ಆಗಬಾರದು- ಕೆಎಸ್ ಈಶ್ವರಪ್ಪ ಅನುಕಂಪ
ಶಿವಮೊಗ್ಗ ಸೆಪ್ಟೆಂಬರ್ 25: ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ನಲ್ಲಿ ತೀರ್ಪು ಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಮತ್ತೊಂದೆಡೆ ಬಿಜೆಪಿಗೆ ನೈತಿಕತೆಯ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಈ ನಡುವೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ಕುಟುಂಬಸ್ಥರ ಮೇಲಿನ ಆರೋಪಕ್ಕೆ ಅನುಕಂಪ ತೋರಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ನಾನು ಏನು ಹೇಳೊಲ್ಲ. ತೀರ್ಪು ಬರುವ ಮುನ್ನ ನ್ಯಾಯ ಸಿಗುತ್ತದೆ ಅಂತಾ ಸಿಎಂ ಹೇಳ್ತಿದ್ರು. ತೀರ್ಪು ಬಂದ ನಂತರ ತೀರ್ಪಿನ ಬಗ್ಗೆ ಮನ್ನಣೆ ಕೊಡಲ್ಲ ಅಂತಾ ಹೇಳ್ತಾ ಇದ್ದಾರೆ. ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಬದ್ಧರಾಗ್ತರೋ ಇಲ್ವೊ ಗೊತ್ತಿಲ್ಲ. ಭಗವಂತನ ಧಯೆಯಿಂದ ಸಿದ್ದರಾಮಯ್ಯ ಅವರ ಪರವಾಗಿ ನ್ಯಾಯ ಸಿಗಲಿ' ಎಂದು ಕರುಣೆ ತೋರಿದರು.

'ಸಿದ್ದರಾಮಯ್ಯ ಪತ್ನಿ ಮುಗ್ದ ಹೆಣ್ಣು ಮಗಳು, ಅವರಿಗೆ ಅನ್ಯಾಯ ಆಗಬಾರದು. ಸಾತ್ವಿಕ ಹೆಣ್ಣು ಮಗಳು ಅವರು. ನಾನು ಭಗವಂತನಿಗೆ ಪ್ರಾರ್ಥನೆ ಮಾಡ್ತೇನೆ. ಆ ತಾಯಿಗೆ ಅನ್ಯಾಯ ಆಗಬಾರದು. ಸಹಿ ಮಾಡು ಅಂದ್ರೆ ಮನೆಯವರು ಸಹಿ ಮಾಡ್ತಾರೆ. ಆ ತಾಯಿಗೆ ಅನ್ಯಾಯ ಆಗಬಾರದು' ಎಂದು ಕನಿಕರ ತೋರಿದರು.
'ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ ಅಂತಿದ್ದಾರೆ. ಹಾಗಾದ್ರೆ ಕೋರ್ಟ್ ಮುಚ್ಚುಬಿಡಿ, ಯಾಕೆ ಬೇಕು ಕೋರ್ಟ್. ನಿಮ್ಮ ಪರವಾಗಿ ಬಂದ್ರೆ ನ್ಯಾಯ, ನಿಮ್ಮ ವಿರುದ್ಧ ತೀರ್ಪು ಬಂದ್ರೆ ಅನ್ಯಾಯನಾ? ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಸರಿಯಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರೇ ನೀವು ಸುಪ್ರೀಂ ಕೋರ್ಟ್ ಗೆ ಹೋಗಿ. ಆದರೆ ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ' ಎಂದು ಕೆಎಸ್ ಈಶ್ವರಪ್ಪ ತಾಕೀತು ಮಾಡಿದರು.
'ನಿಮಗೆ ನ್ಯಾಯ ಸಿಗಲಿ ಅನ್ನೋದು ನನ್ನ ಬಯಕೆ. ರಾಜೀನಾಮೆ ಕೊಡಲ್ಲ ಅನ್ನೋದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರೋಲ್ಲ. ನನಗೆ ಮಾತಾನಾಡೋಕೆ ನೈತಿಕ ಹಕ್ಕಿದೆ. ಯಾಕೆಂದರೆ ನನ್ನ ಮೇಲೆ ಬಂದ ಆರೋಪದಿಂದ ನಾನು ಕೂಡಲೇ ರಾಜೀನಾಮೆ ನೀಡಿದೆ. ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗಿ. ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಅದು ಮಾಡಿ' ಎಂದು ಸಿದ್ದರಾಮಯ್ಯ ಅವರಿಗೆ ಕಿವಿ ಮಾತು ಹೇಳಿದರು.

'ಯಡಿಯೂರಪ್ಪ ಮೇಲೆ ಆರೋಪ ಬಂದಮೇಲೆ ತಕ್ಷಣ ರಾಜೀನಾಮೆ ಕೊಟ್ರು. ಸಿದ್ದರಾಮಯ್ಯ ಪ್ರಕರಣ ವನ್ನ ಇಡೀ ಪ್ರಪಂಚ ನೋಡುತ್ತದೆ. ಹೈಕೋರ್ಟ್ ತೀರ್ಪು ಒಪ್ಪಲ್ಲ ಅನ್ನೋದು ಯಾವ ನ್ಯಾಯ. ಕೋರ್ಟಿನ ತೀರ್ಪು ಯಾರಿದಂಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ' ಎಂದರು.
ಯತ್ನಾಳ್ ಈಶ್ವರಪ್ಪ ಮನೆಗೆ ಭೇಟಿ ವಿಚಾರ
ಇನ್ನೂ ಇದೇ ವೇಳೆ ಯತ್ನಾಳ್ ಈಶ್ವರಪ್ಪ ಮನೆಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, 'ಆನೇಕ ಸ್ನೇಹಿತರು ನಮ್ಮ ಮನೆಗೆ ಬಂದಿದ್ರು. ನೂರು ಮಾತಾನಾಡಿದ್ದೇವೆ, ಅದೆಲ್ಲಾ ಹೇಳೋಕೆ ಆಗೋಲ್ಲ' ಎಂದು ಹೇಳಿದರು.
ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರಿನಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಂದು ಬಿಜೆಪಿ ಕಚೇರಿ ಪಾಂಚಜನ್ಯದಿಂದ ಆಜಾದ್ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೈ ಕೋರ್ಟಿನಲ್ಲಿ ಸಿಎಂ ಅರ್ಜಿ ವಜಾ ಆಗಿದೆ. ಸಾವಿರಾರು ಕೋಟಿ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಎಸ್ಸಿ-ಎಸ್ಟಿ ಹಣ, ಮುಡಾ ಮುಳುಗಿಸಿದ ಕೀರ್ತಿ ಸಿದ್ದರಾಮಯ್ಯಗಿದೆ. ಹೀಗಾಗಿ ಅವರು ತನಿಖೆಗೆಗೆ ಸಹಕರಿಸಿ ರಾಜೀನಾಮೆ ಕೊಡಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications