ಸಿಗಂದೂರಿನಲ್ಲಿ ರಾಘವೇಶ್ವರ ಶ್ರೀಗಳ ಪ್ರವಚನ ರದ್ದು
ಸಾಗರ, ಏ. 11 : ರಾಘವೇಶ್ವರ ಸ್ವಾಮಿಯಿಂದ ಜಿಲ್ಲೆಯ ಸಿಗಂದೂರಿನಲ್ಲಿ ಆಯೋಜಿಸಿದ್ದ ದಿವ್ಯ ಪ್ರವಚನಕ್ಕೆ ಜಿಲ್ಲಾಡಳಿತ ತಡೆ ನೀಡುವುದಾಗಿ ಶನಿವಾರ ಅಧಿಕೃತವಾಗಿ ತಿಳಿಸುವ ಮೂಲಕ ನಡೆಯಬಹುದಾಗಿದ್ದ ಸಂಘರ್ಷವೊಂದು ತಪ್ಪಿದೆ. ಈ ಮೂಲಕ ಹಿಂದುಳಿದ ಮತ್ತು ದಲಿತ ಜನಸಮುದಾಯಗಳು ಎತ್ತಿದ್ದ ಪ್ರತಿಭಟನಾ ದನಿಗೆ ಜಯಸಿಕ್ಕಿದೆ.
ಹಿನ್ನೆಲೆ : ಸಿಗಂದೂರಿನ ಚೌಡಮ್ಮದೇವಿಯ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ಅಲ್ಲಿನ ಅರ್ಚಕರಾಗಿದ್ದ ಶೇಷಗಿರಿ ಭಟ್ಟ ಅವರು ರಾಮಚಂದ್ರಾಪುರ ಮಠದ ಸೊತ್ತನ್ನಾಗಿ ಮಾಡಿದ್ದರು. ಅಲ್ಲದೆ, ಹಿಂದುಳಿದ ದೀವರು (ಈಡಿಗ) ಸಮುದಾಯ ಮತ್ತು ದಲಿತ ಸಮುದಾಯಗಳು ಕೋಳಿ ಕುರಿ ಹರಕೆ ಕಟ್ಟಿ ತೀರಿಸುವ, ಕಾಲಾಂತರದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಇತ್ತಿದ್ದರು.

ದೇವಸ್ತಾನದ ಟ್ರಸ್ಟಿ ರಾಮಪ್ಪ ನಾಯ್ಕನನ್ನು ಬೆದರು ಬೊಂಬೆ ಮಾಡಿ ಈ ದೇವಸ್ಥಾನಕ್ಕೆ ಸಂಬಂಧವೇ ಪಡದ ಜನರು ಪೂರ್ಣ ನಿರ್ವಹಣೆ ಮಾಡುತ್ತಿದ್ದಾರೆಂದು ಕೆಲವರು ದೂರುತ್ತಿದ್ದರು. ಇಡೀ ದೇವಸ್ಥಾನದಲ್ಲಿ ದೇವರಿಗಿಂತಲೂ ರಾಘವೇಶ್ವರರ ಭಾವಚಿತ್ರಗಳೇ ಎದ್ದು ಹೊಡೆಯುತ್ತಿರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.
ಅನಾದಿಕಾಲದಿಂದ ಜನರು ಹರಕೆ ತೀರಿಸುತ್ತಿದ್ದ ಕ್ರಮವನ್ನು ತಪ್ಪಿಸಿ ಆವರಣದಲ್ಲಿ ಮಾಂಸಾಹಾರ ನಿಷೇಧವೆಂದು ಬೋರ್ಡು ಹಾಕಲಾಗಿತ್ತು. ರಾಮಚಂದ್ರಾಪುರದ ಮಠಕ್ಕೆ ಯಾವುದೇ ಸಮುದಾಯದ ಸ್ವಾಮೀಜಿಗಳನ್ನು ಕರೆದು ಪಾದಪೂಜೆ ಮಾಡುವ ಪರಿಪಾಠ ಇಲ್ದೇ ಇರುವಾಗ, ಹಿಂದುಳಿದವರಿಗೆ ಸೇರಿದ ದೇವಸ್ಥಾನದಲ್ಲಿ ರಾಘವೇಶ್ವರರಿಗೆ ಪಾದಪೂಜೆ ಮಾಡುವ ಕ್ರಮದ ಬಗ್ಗೆಯೂ ಜನರಲ್ಲಿ ಸಿಡಿಮಿಡಿಯಿತ್ತು.
ರಾಘವೇಶ್ವರ ಸ್ವಾಮಿಯು ಮಹಿಳೆಯೊಬ್ಬರಿಂದ ಅತ್ಯಾಚಾರದ ಆರೋಪಕ್ಕೊಳಗಾಗಿರುವಾಗ, ಹೆಣ್ಣು ದೇವತೆ ಚೌಡೇಶ್ವರಿಯ ಆವರಣದಲ್ಲಿ ಜನರಿಗೆ ಪ್ರವಚನ ನೀಡುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಇದು ತಮ್ಮ ದೇವರಿಗೆ ಮಾಡುವ ಅವಮಾನ ಎಂದು ಭಾವಿಸಿ ಕಳೆದ ವಾರದಿಂದ ಉಗ್ರ ಪ್ರತಿಭಟನೆಗಳು ಆಯೋಜನೆಗೊಂಡಿದ್ದವು.
ಈ ಸಂದರ್ಭದಲ್ಲಿ ಮದ್ಯಪ್ರವೇಶ ಮಾಡಿದ ಜಿಲ್ಲಾಧಿಕಾರಿಗಳು ಮತ್ತು ರಕ್ಷಣಾಧಿಕಾರಿಗಳು ಕಳೆದ ಮೂರ್ನಾಲ್ಕು ದಿನಗಳಿಂದಲೂ ಎರಡೂ ಗುಂಪಿನವರ ವಾದಗಳನ್ನು ಕೇಳಿಕೊಂಡು, ಕಾನೂನು ಪಾಲನೆಯ ದೃಷ್ಟಿಯಿಂದ ತಾವು ತೆಗೆದುಕೊಳ್ಳುವ ಕ್ರಮಗಳ ಬಗ್ಗೆಯೂ ತಿಳಿಹೇಳಿದ್ದರಲ್ಲದೆ ಸಂಘರ್ಷ ನಡೆಯದಂತೆ ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಈ ಕಾರಣದಿಂದ ಶುಕ್ರವಾರ ಸಿಗಂದೂರಿಗೆ ತೆರಳಿ ರಾಘವೇಶ್ವರರ ಫೋಟೋ ತೆಗೆದು ಹಾಕಿ ಶ್ರೀಧರ ಸ್ವಾಮಿಗಳ ಫೋಟೋ ಹಾಕುವ ಪ್ರತಿಭಟನೆಯೊಂದು ರದ್ದಾಗಿತ್ತು. ಜೊತೆಗೆ, ಅಧಿಕಾರಿಗಳು ರಾಘವೇಶ್ವರರನ್ನು ಸಿಗಂದೂರಿಗೆ ಬರದಂತೆ ತಡೆಯುವುದಾಗಿ ಶನಿವಾರ ಬೆಳಿಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.












Click it and Unblock the Notifications