ಶಿವಮೊಗ್ಗ; ರೈತರಿಂದ ರೈಲು ತಡೆ ಚಳವಳಿ
ಶಿವಮೊಗ್ಗ, ಫೆಬ್ರವರಿ 18; ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಹಿನ್ನೆಲೆ ದೇಶಾದ್ಯಂತ ರೈಲು ತಡೆ ಚಳವಳಿ ನಡೆಯುತ್ತಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿಯೂ ಚಳವಳಿ ನಡೆಸಲಾಯಿತು. ಆದರೆ, ಪ್ರತಿಭಟನಾನಿರತ ರೈತರನ್ನು ರೈಲು ನಿಲ್ದಾಣದ ಒಳಗೆ ಬಿಡದೆ ತಡೆ ಹಿಡಿಯಲಾಯಿತು.
ಗುರುವಾರ ರೈತ ಸಂಘದ ನೇತೃತ್ವದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಮೊಂಡಾಟ ಮುಂದುವರೆಸದಂತೆ ಎಚ್ಚರಿಸಲಾಯಿತು.
ರೈಲು ತಡೆ ಚಳವಳಿಯ ಹಿನ್ನೆಲೆಯಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮುಖ್ಯ ದ್ವಾರದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿತ್ತು. ಪ್ರಯಾಣಿಕರನ್ನು ಮಾತ್ರ ಒಳ ಬಿಡಲಾಗುತ್ತಿತ್ತು. ಪ್ರತಿಭಟನೆ ನಡೆಸಲು ಬಂದ ರೈತರನ್ನು ಪೊಲೀಸರು ಮುಖ್ಯ ದ್ವಾರದಲ್ಲೇ ತಡೆದರು.

ಮಾತಿನ ಚಕಮಕಿ; ರೈಲು ನಿಲ್ದಾಣದ ಮುಖ್ಯ ದ್ವಾರದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ರೈಲು ತಡೆಗೆ ಅವಕಾಶ ನೀಡಬೇಕು ಎಂದು ರೈತರು ಪಟ್ಟು ಹಿಡಿದರೆ, ನಿಲ್ದಾಣದ ಒಳಗೆ ಬಿಡಲು ಪೊಲೀಸರು ಒಪ್ಪಲಿಲ್ಲ. ಈ ವೇಳೆ ತಮ್ಮನ್ನು ಬಂಧಿಸಿ, ಕೇಸ್ ಹಾಕುವಂತೆ ರೈತರು ಆಗ್ರಹಿಸಿದರು.
ಪ್ರತಿಭಟನೆಗೆ ಅವಕಾಶ: ರೈಲು ತಡೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಪೊಲೀಸರು, ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆಗೆ ಅವಕಾಶ ನೀಡಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕೆ. ಟಿ. ಗಂಗಾಧರ್, "ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲವಾದರೆ ರೈತರು ಸಂಕಷ್ಟಕ್ಕೀಡಾಗಬೇಕಾಗುತ್ತದೆ" ಎಂದರು.

ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಮಾತನಾಡಿ, "ಈ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಲಿದೆ" ಎಂದು ಹೇಳಿದರು.
ಪ್ರಗತಿಪರ ಸಂಘಟನೆಗಳ ಮುಖಂಡ ಕೆ. ಎಲ್. ಅಶೋಕ್, ದಲಿತ ಸಂಘರ್ಷ ಸಮಿತಿ ಮುಖಂಡ ಹಾಲೇಶಪ್ಪ, ರೈತ ಸಂಘದ ವೀರೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.












Click it and Unblock the Notifications