ಶಿವಮೊಗ್ಗ ಹೊಸ ಜೈಲಿನಲ್ಲಿ ವಿಚಾರಣಾಧೀನ ಖೈದಿ ಸಾವು
ಶಿವಮೊಗ್ಗ, ಮಾರ್ಚ್ 01 : ಕೆಲವು ದಿನಗಳ ಹಿಂದೆ ಉದ್ಘಾಟನೆಗೊಂಡಿರುವ ಶಿವಮೊಗ್ಗದ ನೂತನ ಕಾರಾಗೃಹದಲ್ಲಿ ಖೈದಿಯೊಬ್ಬ ಮೃತಪಟ್ಟಿದ್ದಾನೆ. ಮೃತಪಟ್ಟ ವಿಚಾರಣಾಧೀನ ಖೈದಿ ಭದ್ರಾವತಿ ಮೂಲದವರು.
ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿರುವ ನೂತನ ಕಾರಾಗೃಹದಲ್ಲಿ ಅಸ್ವಸ್ಥಗೊಂಡಿದ್ದ ವಿಚಾರಣಾಧೀನ ಖೈದಿ ಮೂಡಲಗಿರಿಯಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಖೈದಿ ಭದ್ರಾವತಿ ತಾಲೂಕು ಹೊಸನಂಜಾಪುರ ಮೂಲದವರಾಗಿದ್ದಾರೆ.
ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಲಗಿರಿಯಪ್ಪ ಅವರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಎರಡು ದಿನದಿಂದ ಅಸ್ವಸ್ಥಗೊಂಡಿದ್ದ ಮೂಡಲಗಿರಿಯಪ್ಪ ಅವರಿಗೆ ಪ್ರತಿದಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ ಬೆಳಗ್ಗೆ ಸಹ ಮೂಡಲಗಿರಿಯಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಪೊಲೀಸರು ಥಳಿಸಿದ್ದೇ ಮೂಡಲಗಿರಿಯಪ್ಪ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಜನವರಿ ತಿಂಗಳಿನಲ್ಲಿ ಶಿವಮೊಗ್ಗದ ನೂತನ ಜೈಲು ಉದ್ಘಾಟನೆಗೊಂಡಿತ್ತು. ಕಳೆದ ವಾರದಿಂದ ಹೊಸ ಕಾರಾಗೃಹಕ್ಕೆ ಖೈದಿಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.












Click it and Unblock the Notifications