ಶಿವಮೊಗ್ಗ : ಫ್ರೀಡಂಪಾರ್ಕ್ ಮಾದರಿ ಹಳೇ ಜೈಲು ಅಭಿವೃದ್ಧಿ
ಶಿವಮೊಗ್ಗ, ಜೂನ್ 11 : ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ನೂತನ ಕಟ್ಟಟಕ್ಕೆ ಸ್ಥಳಾಂತರ ಮಾಡಿ, ಹಳೆ ಜೈಲನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬುಧವಾರ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಗೃಹ ಸಚಿವರು, ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾರಾಗೃಹವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಹಳೆ ಜೈಲನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಈಗಾಗಲೇ ನಗರದ ಹೊರಭಾಗದ ಸೋಗಾನೆಯಲ್ಲಿ ನೂತನವಾಗಿ ಕಾರಾಗೃಹ ನಿರ್ಮಿಸಲಾಗಿದೆ. ಜಿಲ್ಲಾ ಕಾರಾಗೃಹವನ್ನು ಅಲ್ಲಿಗೆ ಸ್ಥಳಾಂತರ ಮಾಡಿ, ಹಳೆ ಜೈಲನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಹಳೆ ಜೈಲು ಸದ್ಯ ಶಿವಮೊಗ್ಗ ಹೃದಯ ಭಾಗದಲ್ಲಿದೆ. ಬೆಂಗಳೂರಿನ ಸೆಂಟ್ರಲ್ ಜೈಲ್ ಸ್ಥಳಾಂತರ ನಂತರ ಫ್ರೀಡಂ ಪಾರ್ಕ್ ಅಭಿವೃದ್ಧಿಪಡಿಸಿದಂತೆ ಹಳೆ ಜೈಲನ್ನು ಬಹುಉಪಯೋಗಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.
ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ, ಮಹಿಳಾ ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ನಿಯೋಜಿಸುವ ಬಗ್ಗೆಯೂ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. [ಮಹಾರಾಣಿ ಕಾಲೇಜು ಎದುರು ವಿಪತ್ತು ನಿರ್ವಹಣೆ ಕೇಂದ್ರ]
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಶಿವಮೊಗ್ಗದಲ್ಲಿ ಕೆಲವು ಸಾರ್ವಜನಿಕ ಹಬ್ಬಗಳು ಈ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದವು. ಈ ಹಿಂದಿನ ಸರ್ಕಾರ ಈ ಕ್ರೀಡಾಂಗಣವನ್ನು ಸಿಂಥಟಿಕ್ ಟ್ರಾಕ್ ನೊಂದಿಗೆ ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲು ಸೂಕ್ತ ಜಾಗ ಇಲ್ಲದಂತಾಗಿದೆ.
ಆದ್ದರಿಂದ, ಹಳೆ ಜೈಲು ಪ್ರದೇಶ ಇಂತಹ ಆಚರಣೆಗಳಿಗೆ ಸೂಕ್ತ ಜಾಗವಾಗಿರುವುದರಿಂದ ಶಿವಮೊಗ್ಗ ನಾಗರಿಕರ ಅನುಕೂಲಕ್ಕಾಗಿ ಆದ್ಯತೆ ಮೇರೆಗೆ ಅದನ್ನು ಅಭಿವೃದ್ಧಿಪಡಿಸಲು ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕುಬೇಕೆಂದು ಮನವಿ ಮಾಡಿದರು.












Click it and Unblock the Notifications