ಶಿವಮೊಗ್ಗ, ಗದಗದಲ್ಲಿ ಶಂಕಿತ ನಿಪಾಹ್ ಎರಡು ಪ್ರಕರಣ ಪತ್ತೆ
ಶಿವಮೊಗ್ಗ, ಮೇ 24 : ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಸ್ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದ್ದು, ಈ ರೋಗದ ಕುರಿತಂತೆ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಭಾರತದಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಈ ಮಾರಣಾಂತಿಕ ಕಾಯಿಲೆ ಶಿವಮೊಗ್ಗ, ಗದಗದಲ್ಲಿಯೂ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ವ್ಯಕ್ತಿಗೆ ನಿಪಾಹ್ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೆ ಜಿಮ್ಸ್ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರು ಕೆಲಸ ಅರಸಿ ಕೇರಳಕ್ಕೆ ಹೋದಾಗ ನಿಪಾಹ್ ವೈರಸ್ ತಗಲಿರೋ ಶಂಕೆ ಮೂಡಿದ್ದು, ರೋಗಿಯ ರಕ್ತದ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. 48 ಗಂಟೆಯೊಳಗೆ ವರದಿ ಬಂದ ನಂತರ ಮುಂದಿನ ಚಿಕಿತ್ಸೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಮ್ಸ್ ಆಡಳಿತಾಧಿಕಾರಿ ಎ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಂತೆ ಗ್ರಾಮದ ಮಿಥುನ್ ಎಂಬ ಯುವಕನಲ್ಲಿಯೂ ನಿಫಾ ವೈರಸ್ ಪತ್ತೆಯಾಗಿರುವ ಅನುಮಾನ ಮೂಡಿದೆ. ಕಾಸರಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಥುನ್ ಸದ್ಯ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.
ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ನಿಫಾ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications