ಅಕಾಲಿಕ ಮಳೆಗೆ ಶಿವಮೊಗ್ಗ ತತ್ತರ: ಅಡಿಕೆ, ಭತ್ತದ ಬೆಳೆ ನಾಶ

ಶಿವಮೊಗ್ಗ, ಡಿಸೆಂಬರ್‌ 14 : ಮಾಂಡೌಸ್ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ಬಿಸಿಲು ಕಾಣಿಸಿಕೊಂಡಿದೆ. ಈ ನಡುವೆ ಜಿಲ್ಲಾಡಳಿತ ಬೆಳೆ ಹಾನಿ ಕುರಿತು ಸಮೀಕ್ಷೆ ಆರಂಭಿಸಿದೆ.

ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರ ಮಳೆಯಾಗಿದೆ. ತೀವ್ರ ಚಳಿಯು ಆವರಿಸಿತ್ತು.

ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಇತ್ತು. ಮೈಕೊರೆಯುವ ಚಳಿ ಜೊತೆಗೆ ಮಳೆಯು ಅಬ್ಬರಿಸಿತ್ತು. ಇದರಿಂದ ಜನರು ಹೈರಾಣಾಗಿದ್ದರು. ಜಿಲ್ಲೆಯಲ್ಲಿ ಬುಧವಾರ ಬಿಸಿಲು ಕಾಣಿಸಿಕೊಂಡಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆಗೆ ಜಿಲ್ಲೆಯಾದ್ಯಂತ ಬೆಳೆ ಹಾನಿ ಸಂಭವಿಸಿದೆ. ಗದ್ದೆ ಕೊಯ್ಲು ಹೊತ್ತಿಗೆ ಮಳೆ ಸುರಿದಿದ್ದರಿಂದ ಹಲವೆಡೆ ಭತ್ತದ ಬೆಳೆ ಹಾನಿಯಾಗಿದೆ. ಹಲವು ರೈತರು ಕೊಯ್ಲು ಮಾಡಲು ಸಿದ್ಧತೆ ನಡೆಸಿದ್ದರು. ಈಗ ಭತ್ತ ಹಸಿಯಾಗಿದ್ದು, ಗದ್ದೆಗಳು ಕೆಸರುಮಯವಾಗಿದೆ. ಕೊಯ್ಲು ಮಾಡಿದವರಿಗೆ ಭತ್ತ ರಾಶಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ನೂರಾರು ಎಕರೆ ಭತ್ತದ ಬೆಳೆ ನಾಶ

ನೂರಾರು ಎಕರೆ ಭತ್ತದ ಬೆಳೆ ನಾಶ

ಸಾಗರ ತಾಲೂಕು ಆನಂದಪುರ ಸುತ್ತಮುತ್ತ ಬೆಳೆ ಹಾನಿಯಾಗಿದೆ. ಹೊಸಕೊಪ್ಪ, ಕಣ್ಣೂರು, ಭೈರಾಪುರ, ಸಂಗಣ್ಣನಕೆರೆ, ಹಿರೇಹಾರಕ, ಅಂದಾಸುರ, ಬಳ್ಳೀಬೈಲು, ಅಡೂರು, ಹೊಸಗುಂದ, ಐಗಿನಬೈಲು, ಚೆನ್ನಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ತೀರ್ಥಹಳ್ಳಿಯ ಮಂಡಗದ್ದೆ, ಅಗ್ರಹಾರ, ಕಸಬಾ ಮತ್ತು ಮತ್ತೂರು ಹೋಬಳಿಯಲ್ಲಿ ಗದ್ದೆ ಕೊಯ್ಲು ಮಾಡಲಾಗಿದೆ. ಮಳೆಗೆ ಫಸಲು ಗದ್ದೆಯಲ್ಲೇ ನಾಶವಾಗುತ್ತಿದೆ. ಮಳೆ ಮುಂದುವರೆದರೆ ಗದ್ದೆಯಲ್ಲೇ ಮೊಳಕೆ ಬರುವ ಆತಂಕ ರೈತರಿಗೆ ಎದುರಾಗಿದೆ.

ಅಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ

ಅಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ

ಹೊಸನಗರ ತಾಲೂಕಿನಲ್ಲಿಯೂ ಬೆಳೆಹಾನಿ ಸಂಭವಿಸಿದೆ. ನಗರ ಹೋಬಳಿಯ ಅರಮನೆ ಕೊಪ್ಪ, ಮೂಡುಗೊಪ್ಪ, ಬೇಳೂರು, ಹೆಬ್ಬುರುಳಿ, ಅಂಡಗದೋದೂರು, ಹುಂಚ, ಕೆರೆಹಳ್ಳಿ ಸೇರಿದಂತೆ ವಿವಿಧೆಡೆ ಬೆಳೆ ಹಾನಿಯಾಗಿದೆ. ‘ಪ್ರಾಥಮಿಕ ಮಾಹಿತಿ ಪ್ರಕಾರ ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಉಳಿದ ತಾಲೂಕಿನಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಈ ಕುರಿತು ಸಮೀಕ್ಷ ನಡೆಸಲಾಗುತ್ತಿದೆ' ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.

ಅಕಾಲಿಕ ಮಳೆಯಿಂದ ಅಡಿಕೆ ಬೆಳೆ ನಾಶ

ಅಕಾಲಿಕ ಮಳೆಯಿಂದ ಅಡಿಕೆ ಬೆಳೆ ನಾಶ

ಅಡಕೆ ಬೆಳೆಗಾರರಿಗೆ ಈ ಮಳೆ, ಗಾಯದ ಮೇಲೆ ಬರೆ ಎಳೆದಿದೆ. ಎಲೆ ಚುಕ್ಕೆ ರೋಗದಿಂದ ಇಳುವರಿ ಕಡಿಮೆಯಾಗಿದೆ. ಈಗ ಕೊಯ್ಲು ಮುಗಿಸಿ ಅಡಕೆಯನ್ನು ಬೇಯಿಸಿ ಒಣಗಿಸುವ ಹೊತ್ತಿಗೆ ಮಳೆ ಸುರಿದಿದೆ. ಅಡಕೆಯನ್ನು ಒಣಗಿಸಲು ಬಿಸಿಲು ಇಲ್ಲದೆ ಇಟ್ಟಲ್ಲೆ ಇಟ್ಟು ಹಾಳಾಗುತ್ತಿದೆ. ಅಡಕೆ ಮೇಲೆ ಬಿಳಿ ಫಂಗಸ್ ಕಾಣಿಸಿದ್ದು, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಬುಧವಾರ ಜಿಲ್ಲೆಯಲ್ಲಿ ಕೊಂಚ ಬಿಸಿಲು ಕಾಣಿಸುತ್ತಿದ್ದಂತೆ ರೈತರು ಮಳೆ ಬರುವ ಆತಂಕದ ನಡುವೆಯೇ ಅಡಿಕೆ ಒಣಗಿಸಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಖುದ್ದಾಗಿ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ

ಖುದ್ದಾಗಿ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ

ಮೌಂಡೌಸ್ ಚಂಡ ಮಾರುತದಿಂದ ಬೆಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಲ್ಲಾ ತಾಲೂಕಿನಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ. ‘ಭತ್ತ ಹಾನಿಗೊಳಗಾದ ಬಗ್ಗೆ ಮಾಹಿತಿ ಇದೆ. ಹಾಗಾಗಿ ಆಯಾ ತಾಲೂಕಿನ ಬೆಳೆ ಹಾನಿ ಕುರಿತು ಖುದ್ದಾಗಿ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+