ಶಿವಮೊಗ್ಗ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಹೇಳಿದ್ದು ಹೀಗೆ; ಅರಳಲಿದೆ ಕಮಲ, ಬೆಳಗಲಿದೆ ಶಿವಮೊಗ್ಗ, ಗೆಲ್ಲಲಿದೆ ಕರ್ನಾಟಕ...!
ಶಿವಮೊಗ್ಗ, ಏಪ್ರಿಲ್ 11: ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 52 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ/ ಅದರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಕೂಡ ಸೇರಿದ್ದಾರೆ.
ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡು 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಪಟ್ಟಿಯಲ್ಲಿ ಒಂಬತ್ತು ವೈದ್ಯರು, ತಲಾ ಒಬ್ಬೊಬ್ಬ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, 31 ಸ್ನಾತಕೋತ್ತರ ಪದವೀಧರರಿದ್ದಾರೆ. 189 ಮಂದಿ ಅಭ್ಯರ್ಥಿಗಳ ಪೈಕಿ 8 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಐವರು ವಕೀಲರು ಮತ್ತು 3 ನಿವೃತ್ತ ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಟಿಕೆಟ್ ಪಡೆದಿರುವ ಅಭ್ಯರ್ಥಿಗಳು
* ಬಿ. ವೈ. ವಿಜಯೇಂದ್ರ- ಶಿಕಾರಿಪುರ*
ವಿಧಾನಸಭಾ ಚುನಾವಣೆಗೆ ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕರು ಬಿ. ಎಸ್. ಯಡಿಯೂರಪ್ಪ. ಆದರೆ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಕಾರಣ ಅವರ ಪುತ್ರ ಬಿ. ವೈ. ವಿಜಯೇಂದ್ರ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಲಾಗಿದೆ.
ಬಿ. ಎಸ್. ಯಡಿಯೂರಪ್ಪ. 2023-24ನೇ ಸಾಲಿನ ಬಜೆಟ್ ಅಧಿವೇಶನದಲ್ಲಿಯೇ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ಕೊನೆಯ ಅಧಿವೇಶನ, ಚುನಾವಣಾ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸದಾ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಶಿಕಾರಿಪುರಕ್ಕೆ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ಬಿ. ವೈ. ವಿಜಯೇಂದ್ರ ಹೆಸರು ಘೋಷಣೆ ಮಾಡಿದೆ.

*ಅರಗ ಜ್ಞಾನೇಂದ್ರ- ತೀರ್ಥಹಳ್ಳಿ*
ತೀರ್ಥಹಳ್ಳಿ ಕ್ಷೇತ್ರದ ಹಾಲಿ ಶಾಸಕರು ಆರಗ ಜ್ಞಾನೇಂದ್ರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಭಾವಿಯಾದ ಗೃಹ ಖಾತೆಯ ಸಚಿವರು. ಹಲವು ವರ್ಷಗಳಿಂದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಮತ್ತು ಆರಗ ಜ್ಞಾನೇಂದ್ರ ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. ಈ ಬಾರಿಯೂ ಬಿಜೆಪಿ ಆರಗ ಜ್ಞಾನೇಂದ್ರ ಅವರನ್ನು ತೀರ್ಥಹಳ್ಳಿಯಿಂದ ಕಣಕ್ಕಿಳಿಸಿದೆ.
ಸುಮಾರು 40 ವರ್ಷಗಳ ಕಾಲ ಬಿಜೆಪಿಗಾಗಿ ದುಡಿದಿರುವ ಆರಗ ಜ್ಞಾನೇಂದ್ರ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರುವ ಮೂಲಕ ಕೊನೆಗೂ ಸಚಿವರಾಗಿದ್ದರು. ಪ್ರಭಾವಿ ಗೃಹ ಖಾತೆಯೇ ಅವರಿಗೆ ಸಿಕ್ಕಿದೆ. 9 ಬಾರಿ ಚುನಾವಣೆಗೆ ಸ್ಪರ್ಧಿಸಿ 4 ಬಾರಿ ಗೆದ್ದಿರುವ ಆರಗ ಜ್ಞಾನೇಂದ್ರ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

* ಮುಂಗೋಟೆ ರುದ್ರೇಶ್- ಭದ್ರಾವತಿ*
ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಮುಂಗೋಟೆ ರುದ್ರೇಶ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರೂ ಸಹ ಭದ್ರಾವತಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮುಂಗೋಟೆ ರುದ್ರೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ರಾಜಕಾರಣ ಪ್ರವೇಶಿಶಿದ್ದ ಮಂಗೋಟೆ ರುದ್ರೇಶ್, ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ರುದ್ರೇಶ್ ಮೂಲತಃ ವಕೀಲರಾಗಿದ್ದು, ಇವರ ತಂದೆ ಮಂಗೋಟೆ ಮುರುಗೆಪ್ಪ ಕೂಡ ಪ್ರಸಿದ್ಧ ವಕೀಲರಾಗಿದ್ದರು. ಅಲ್ಲದೆ ತಾಲೂಕು ವಕೀಲರ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ಸಮಾಜವಾದಿ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಕೆ.ಎಚ್ ಪಟೇಲ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
ಮುಂಗೋಟೆ ರುದ್ರೇಶ್ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕಳೆದ ವರ್ಷ ಸಂಸದ ರಾಘವೇಂದ್ರ ಸಹ ಈ ಬಾರಿ ಮಂಗೋಟೆ ರುದ್ರೇಶ್‌ಗೆ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.
*ಕೆ.ಬಿ.ಅಶೋಕ್ ನಾಯಕ್- ಶಿವಮೊಗ್ಗ ಗ್ರಾಮಾಂತರ*
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಹೆಸರು ಪ್ರಕಟಿಸಲಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಡಾ. ಶ್ರೀನಿವಾಸ ಕರಿಯಣ್ಣ, ರವಿಕುಮಾರ್ ಹಾಗೂ ಪಲ್ಲವಿ ಹೈಕಮಾಂಡ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
* ಎಸ್. ಕುಮಾರ್ ಬಂಗಾರಪ್ಪ- ಸೊರಬ*
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ (ಬಿಜೆಪಿ), ಮಧು ಬಂಗಾರಪ್ಪ (ಕಾಂಗ್ರೆಸ್) ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇವರ ನಡುವಿನ ಸ್ಪರ್ಧೆಯಿಂದಾಗಿ ಪ್ರತಿ ಬಾರಿ ಚುನಾವಣೆ ಎದುರಾದಾಗಲೂ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತದೆ. ಮೊದಲು ಬಂಗಾರಪ್ಪ ಕುಟುಂಬದ ಹಿಡಿತದಲ್ಲಿಯೇ ಕ್ಷೇತ್ರವಿದೆ. 2008ರಲ್ಲಿ ಬಂಗಾರಪ್ಪ ಇಬ್ಬರು ಪುತ್ರರಿಗೂ ಸೋಲಿನ ರುಚಿ ತೋರಿಸಿ ಗೆದ್ದವರು ಮಾಜಿ ಸಚಿವ ಹರತಾಳು ಹಾಲಪ್ಪ. ಸದ್ಯ ಅವರು ಸಾಗರ ಕ್ಷೇತ್ರದ ಶಾಸಕರು. ಸೊರಬದ ಹಾಲಿ ಶಾಸಕರು ಕುಮಾರ್ ಬಂಗಾರಪ್ಪ.
ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ನಡುವೆ ಕೌಟುಂಬಿಕವಾಗಿ ಹೇಗೆ ಹೊಂದಾಣಿಕೆ ಇಲ್ಲವೋ, ರಾಜಕೀಯದಲ್ಲಿಯೂ ಹಾಗೆ ಇದೆ. ಇಬ್ಬರು ಸಹ ಪರಸ್ಪರ ಎದುರಾಳಿಗಳು. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಕೊಂಚ ಬದಲಾವಣೆಯಾಗಿದೆ. ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇಬ್ಬರಿಗೂ ಆಯಾ ಪಕ್ಷಗಳು ಟಿಕೆಟ್ ನೀಡಿದ್ದು, ಕುಮಾರ್ ಬಂಗಾರಪ್ಪ, ಕಾಂಗ್ರೆಸ್‌ನ ಮಧು ಬಂಗಾರಪ್ಪ ಎದುರಾಳಿಗಳು ಆಗುವುದು ಖಚಿತವಾಗಿದೆ.
*ಎಚ್. ಹಾಲಪ್ಪ- ಸಾಗರ*
ಮೇ 10ರ ಬುಧವಾರ ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಸಹ ಒಂದು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಹರತಾಳು ಹಾಲಪ್ಪ ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ .
ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.












Click it and Unblock the Notifications