Sagara constituency; ಮಾವ, ಅಳಿಯ ಬಿಜೆಪಿಗೆ ಸೋಲುಣಿಸುವರೇ?
ಹಚ್ಚ ಹಸಿರಿನ ಪಶ್ಚಿಮ ಘಟ್ಟ, ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ, ಲಿಂಗನಮಕ್ಕಿ ಜಲಾಶಯದ ಹಿನ್ನೀರು, ವಿಶ್ವವಿಖ್ಯಾತ ಜೋಗ ಜಲಪಾತ, ಸಿಗಂದೂರು ಶ್ರೀ ಚೌಡೇಶ್ವರಿ ಸೇರಿದಂತೆ ಅನೇಕ ಪ್ರವಾಸಿ, ಧಾರ್ಮಿಕ ಕೇಂದ್ರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ. ಕಾಗೋಡು ಚಳವಳಿ ಮೂಲಕ ರಾಷ್ಟ್ರದ ಗಮನವನ್ನು ಸೆಳೆದ ಸ್ಥಳವಿದು.
ನೋಡಲು ಸಾಗರ ಕ್ಷೇತ್ರ ಎಷ್ಟು ಸುಂದರವೋ ಸಮಸ್ಯೆಗಳು ಸಾಕಷ್ಟಿವೆ. ಶರಾವತಿ ಮುಳುಗಡೆ ಸಂತ್ರಸ್ತರು ಇನ್ನೂ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರವೂ ಸಿಕ್ಕಿಲ್ಲ. ಯಾವಾಗ ಸರ್ಕಾರ ತಮ್ಮನ್ನು ಒಕ್ಕಲೆಬ್ಬಿಸುತ್ತದೆ? ಎಂಬ ಆತಂಕ ಜನರಲ್ಲಿ ಇದೆ. ಶರಾವತಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದವರೂ ಬಳಿಕ ಆ ವಿಚಾರ ಮರೆತಿದ್ದಾರೆ. ಸಹಜವಾಗಿ ಮಲೆನಾಡು ಭಾಗದ ಕೃಷಿಕರು ಎದುರಿಸುವ ಸಮಸ್ಯೆಗಳು ಇಲ್ಲಿವೆ.

1957ರಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಸೋಲು-ಗೆಲುವು ಕಂಡಿದ್ದಾರೆ. 1972ರಲ್ಲಿ ಮೊದಲ ಬಾರಿಗೆ ಸಂಯುಕ್ತ ಸೋಲಿಯಸ್ಟ್ ಪಕ್ಷದಿಂದ ಕಣಕ್ಕಿಳಿದು ಕಾಗೋಡು ತಿಮ್ಮಪ್ಪ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಸೇರಿದ ಬಳಿಕ 1989, 1994, 1999ರ ಚುನಾವಣೆಯಲ್ಲಿಯೂ ಗೆದ್ದರು. 2004ರಲ್ಲಿ ಬಿಜೆಪಿಯ ಬೇಳೂರು ಗೋಪಾಲಕೃಷ್ಣ ಎದುರು ಸೋತರು. 2013ರಲ್ಲಿ ಬಿಜೆಪಿ, ಕೆಜೆಪಿ ಗೊಂದಲದ ನಡುವೆ ಕಾಗೋಡು ತಿಮ್ಮಪ್ಪ ಮತ್ತೆ ಗೆದ್ದರು. 2018ರಲ್ಲಿ ಹಾರತಾಳು ಹಾಲಪ್ಪ ವಿರುದ್ಧ ಮತ್ತೆ ಸೋತರು. 80 ವರ್ಷ ದಾಟಿರುವ ಕಾಗೋಡು ತಿಮ್ಮಪ್ಪಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಮಾತಿದೆ.
2004, 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಬೇಳೂರು ಗೋಪಾಲಕೃಷ್ಣ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಆಜನ್ಮ ಶತ್ರುಗಳಂತಿದ್ದ ಮಾವ ಕಾಗೋಡು ತಿಮ್ಮಪ್ಪ, ಅಳಿಯ ಬೇಳೂರು ಗೋಪಾಲಕೃಷ್ಣ ಒಂದೇ ಪಕ್ಷದಲ್ಲಿರುವುದು ಕಾಂಗ್ರೆಸ್‌ಗೆ ಸಹಾಯಕವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬೇಳೂರು ಗೋಪಾಕೃಷ್ಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಸಹ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಸಾಗರದ ಯುವ ನಾಯಕ ಕೆ. ಎಸ್. ಪ್ರಶಾಂತ್ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸಿದ್ದರು, ತಮಗೆ ಅವಕಾಶ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ಶಿವಮೊಗ್ಗದ ಮಾಜಿ ಸಂಸದ ಕೆ. ಜಿ. ಶಿವಪ್ಪ ಪುತ್ರ ಪ್ರಶಾಂತ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.

ಹಾಲಪ್ಪ ಚಿತ್ತ ಎತ್ತ?; ಸಾಗರ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಹರತಾಳು ಹಾಲಪ್ಪ. ಮಾಜಿ ಸಚಿವ ಹಾಲಪ್ಪ 2013ರ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ವಿರುದ್ಧ ಸೋತಿದ್ದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾದ ಅವರು 2018ರಲ್ಲಿ ಸಾಗರಕ್ಕೆ ಬಂದರು. ಬೇಳೂರು ಗೋಪಾಲಕೃಷ್ಣ ಬದಿಗೆ ಸರಿಸಿ ಟಿಕೆಟ್ ಪಡೆದರು, ಗೆದ್ದರು. ಈ ಬಾರಿ ಅವರ ವಿರುದ್ಧ ಪಕ್ಷದಲ್ಲಿಯೇ ಕೆಲವು ಅಸಮಾಧಾನವಿದೆ. ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂಬ ಕೂಗು ಇದೆ. ಯುವ ನಾಯಕ ಕೆ. ಎಸ್. ಪ್ರಶಾಂತ್, ಯಡಿಯೂರಪ್ಪ ಆಪ್ತರಾದ ಗುರುಮೂರ್ತಿ ಅವರ ಹೆಸರುಗಳು ಕೇಳಿ ಬರುತ್ತಿವೆ.
ಇನ್ನು 2013ರಲ್ಲಿ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದರು. 23,217 ಮತಗಳನ್ನು ಪಡೆದಿದ್ದರು. 2018ರಲ್ಲಿ ಎಂ. ಬಿ. ಗಿರೀಶ್ ಗೌಡ ಪಕ್ಷದ ಅಭ್ಯರ್ಥಿಯಾಗಿದ್ದರು. ಕೇವಲ 2,100 ಮತ ಪಡೆದಿದ್ದರು. ಈ ಬಾರಿ ಜೆಡಿಎಸ್‌ನಿಂದ ಯಾರು ಅಭ್ಯರ್ಥಿ? ಎಂಬುದು ತಿಳಿದಿಲ್ಲ. ಯಾರೇ ಅಭ್ಯರ್ಥಿಯಾದರೂ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಪೈಪೋಟಿ ಎಂಬುದಂತೂ ಸತ್ಯ. ಎಎಪಿ, ಪ್ರಜಾಕೀಯ ಪಕ್ಷಗಳು ಸಹ ಸಾಗರದಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಬಹುದಾಗಿದೆ.
ಸಾಗರ ಕ್ಷೇತ್ರದ ಒಟ್ಟು ಮತದಾರರು 1,82,622. ಈಡಿಗರು, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರು ಕ್ಷೇತ್ರದ ಶಾಸಕ ಯಾರಾಗಬೇಕು? ಎಂದು ತೀರ್ಮಾನ ಮಾಡುತ್ತಾರೆ.












Click it and Unblock the Notifications