ಶಿವಮೊಗ್ಗ; ಒಟ್ಟು ಮತದಾರರು 14,73,440, ಹೆಸರು ಸೇರಿಸಲು ಅವಕಾಶವಿದೆ
ಶಿವಮೊಗ್ಗ, ಡಿಸೆಂಬರ್ 10; ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದಾರೆ. ಇನ್ನೂ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. ಅರ್ಹರು ಹೆಸರು ಸೇರಿಸಿ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ. ಆರ್ ಕರೆ ನೀಡಿದ್ದಾರೆ.
ಮತದಾರರ ಪಟ್ಟಿ ವೀಕ್ಷಕರಾದ ಉಮಾಶಂಕರ್ ಎಸ್. ಆರ್. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2024ಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಉಮಾಶಂಕರ್ ಎಸ್. ಆರ್., "ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಇನ್ನೂ ಬಾಕಿ ಇರುವ ಯುವ ಮತದಾರರ ನೋಂದಣಿಯನ್ನು ಮಾಡಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗದ ಒಟ್ಟು ಮತದಾರರು ಎಷ್ಟು?; ಜಿಲ್ಲಾಧಿಕಾರಿಗಳು ಮಾತನಾಡಿ, "ಜಿಲ್ಲೆಯಲ್ಲಿ 7 ಮತ ಕ್ಷೇತ್ರಗಳು, 1793 ಮತಗಟ್ಟೆಗಳಿದ್ದು, ದಿನಾಂಕ 05/01/2024ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ 7,28,661 ಪುರುಷ, 7,44,779 ಮಹಿಳೆ ಸೇರಿದಂತೆ ಒಟ್ಟು 14,73,440 ಮತದಾರರು ಇದ್ದಾರೆ" ಎಂದು ತಿಳಿಸಿದರು.
"ಪ್ರಸಕ್ತ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದು, ಇನ್ನು 3 ರಿಂದ 3,500 ಯುವ ಮತದಾರರು ನೋಂದಣಿಗೆ ಬಾಕಿ ಇದ್ದು, ಅರ್ಜಿ ಸ್ವೀಕರಿಸಲಾಗುತ್ತಿದೆ. ಕಳೆದ ವಾರದಲ್ಲೇ 5,527 ಯುವ ಮತದಾರರ ಸೇರ್ಪಡೆ ಆಗಿದೆ. 32 ಸಾವಿರ ಎಪಿಕ್ ಕಾರ್ಡ್‍ಗಳು ಅಂಚೆ ವಿಳಾಸಕ್ಕೆ ರವಾನೆಯಾಗಿದೆ" ಎಂದರು.
"18, 19 ವರ್ಷದ ಯುವ ಮತದಾರರ ನೋಂದಣಿ ಸ್ವಲ್ಪ ಬಾಕಿ ಇದೆ. ಇನ್ನೂ 3 ರಿಂದ 4 ಸಾವಿರ ಯುವ ಮತದಾರರ ನೋಂದಣಿ ಬಾಕಿ ಇದ್ದು ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನೋಂದಣಿ ಆಗಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ ಆಗಿದ್ದು, ಯುವ ಮತದಾರರು ಸೇರಿದಂತೆ ಜನರು ಅರ್ಜಿ ನೀಡಿ ನೋಂದಣಿ ಮಾಡಿಕೊಳ್ಳಬೇಕು" ಎಂದು ಮನವಿ ಮಾಡಿದರು.
"ಶೇಕಡವಾರು ಮತದಾನ ಕಡಿಮೆ ಆಗಲು ಕಾರಣ ಎರಡೆರಡು ಕಡೆ ಹೆಸರು ಇರುವುದು ಹಾಗೂ ಮರಣ ಹೊಂದಿದವರ ಹೆಸರುಗಳು ಪಟ್ಟಿಯಲ್ಲಿ ಇರುವುದಾಗಿದೆ. ಎರಡು ಕಡೆ ಇರುವದನ್ನು ರದ್ದುಪಡಿಸುವ ಅಭಿಯಾನ ಜಾರಿಯಲ್ಲಿದೆ" ಎಂದು ಮಾಹಿತಿ ನೀಡಿದರು.
"ಜಿಲ್ಲೆಯಲ್ಲಿ ಪ್ರತಿ ವರ್ಷ 19 ಸಾವಿರ ಮರಣ ಸಂಭವ ಆಗುತ್ತದೆ. ಇದಕ್ಕೆ ತಕ್ಕನಾಗಿ ಹೆಸರನ್ನು ತೆಗೆದು ಹಾಕುವ ಕೆಲಸ ಆಗಬೇಕು. ಕಳೆದ ಬಾರಿ 6 ಸಾವಿರ ಅಂತರವಿತ್ತು, ಈ ಬಾರಿ 3 ಸಾವಿರಕ್ಕೆ ಇಳಿದಿದ್ದು, ಮರಣ ಹೊಂದಿದವರನ್ನು ಗುರುತಿಸಿ, ಹೆಸರು ತೆಗೆದುಹಾಕಲು ರಾಜಕೀಯ ಪಕ್ಷಗಳ ಏಜೆಂಟರು ಸಹಕರಿಸಬೇಕು" ಎಂದರು.
ಜಿಲ್ಲೆಯಲ್ಲಿ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತವೆ. ರಾಜಕೀಯ ಪಕ್ಷಗಳ ತೊಡಗಿಕೊಳ್ಳುವಿಕೆ, ಅವರು ನೀಡುವ ಮಾಹಿತಿ ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚೆನ್ನಾಗಿ ಆಗಿದೆ. ಹಾಗೂ ಸ್ವೀಪ್ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ನಮೂನೆ 6, 7 ಮತ್ತು 8 ಅರ್ಜಿಗಳು ಆನ್‍ಲೈನ್, ಆಫ್‍ಲೈನ್‍ನಲ್ಲಿ ಬಂದಿದ್ದು ಅಪ್‍ಡೇಟ್ ಆಗುತ್ತಿವೆ. ಹೆಚ್ಚು ಬಾಕಿ ಇರುವುದಿಲ್ಲ. 2-3 ಮತದಾರರ ಕಾರ್ಡ್ ಅನ್ನು ಹೊಂದುವುದು ಅಪರಾಧವಾಗುತ್ತದೆ. ಆದ್ದರಿಂದ ಹೆಚ್ಚು ಕಾರ್ಡ್ ಹೊಂದಿರುವವರು ಸ್ವತಃ ಅದನ್ನು ರದ್ದುಪಡಿಸಿ ಒಂದೇ ಕಾರ್ಡ್ ಹೊಂದಬೇಕು. ಪ್ರತಿ ಮತದಾರರನ್ನು ಗಮನಸಲಾಗುತ್ತಿರುತ್ತದೆ. ಆದ್ದರಿಂದ ಒಂದೇ ಕಾರ್ಡ್ ಇರಬೇಕು. ಮರಣ ಹೊಂದಿದವರ ಹೆಸರನ್ನು ತೆಗೆಸಿಹಾಕಬೇಕು ಹಾಗೂ ವರ್ಗಾವಣೆ, ಸ್ಥಳ ಬದಲಾವಣೆ ಇತರೆ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದರು.












Click it and Unblock the Notifications