ಶಿವಮೊಗ್ಗ : ಮಾಜಿ ಶಾಸಕರ ಮುಖಾಮುಖಿ, ಮಾತಿಲ್ಲ..ನಗುವಿಲ್ಲ!
ಶಿವಮೊಗ್ಗ, ಮಾರ್ಚ್ 06 : ಒಂದೇ ಪಕ್ಷದ ಇಬ್ಬರು ಮಾಜಿ ಶಾಸಕರು ಮುಖಾಮುಖಿಯಾದರು. ಚುನಾವಣಾ ಸಮಯದಲ್ಲಿ ಇಬ್ಬರ ನಡುವೆ ಮಾತುಕತೆ ನಡೆಯಬೇಕಿತ್ತು. ಆದರೆ, ಒಬ್ಬರ ಮುಖ ಒಬ್ಬರು ನೋಡದೆ ತೆರಳಿದ್ದು ವಿಶೇಷ.
ಮಂಗಳವಾರ ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಿಪ್ಪನ್ ಪೇಟೆಯಲ್ಲಿ ಶಿವಾಜಿ ಜಯಂತ್ಯೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು. ಬಿಜೆಪಿ ನಾಯಕರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಅವರು ಇದರಲ್ಲಿ ಪಾಲ್ಗೊಂಡಿದ್ದರು.
ಹರತಾಳು ಹಾಲಪ್ಪ ಸೊರಬ ಕ್ಷೇತ್ರದ ಮಾಜಿ ಶಾಸಕರು, ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರು. ಬೇಳೂರು ಗೋಪಾಲಕೃಷ್ಣ ಸಾಗರ ಕ್ಷೇತ್ರದ ಮಾಜಿ ಶಾಸಕರು ಇಬ್ಬರೂ ಒಂದೇ ಪಕ್ಷದ ನಾಯಕರು ಆದರೆ, ಒಬ್ಬರ ಮುಖ ಮತ್ತೊಬ್ಬರು ನೋಡಲಿಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಅವರು ಸಾಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈಗಾಗಲೇ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಲಪ್ಪ ಸಾಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಬೇಳೂರು ಗೋಪಾಲಕೃಷ್ಣ ಅವರು ಈ ಬಾರಿಯ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಹಾಲಪ್ಪ ಅವರ ಸ್ಪರ್ಧೆಯಿಂದಾಗಿ ಅವರಿಗೆ ಹಿನ್ನಡೆ ಉಂಟಾಗಿದೆ. ಆದ್ದರಿಂದ, ಇಬ್ಬರು ನಾಯಕರು ಇಂದು ಮುಖಾಮುಖಿಯಾದರೂ ಮಾತಿಲ್ಲ, ನಗುವಿಲ್ಲ.












Click it and Unblock the Notifications