ದೀಪದ ಬೆಳಕಲ್ಲಿ ಜೋಗ ಜಲಪಾತದ ಸೌಂದರ್ಯ ಸವಿಯಿರಿ
ಶಿವಮೊಗ್ಗ, ಆಗಸ್ಟ್ 26: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿ. ಸಂಜೆಯ ನಂತರವೂ ಜಲಪಾತ ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಜೋಗ ಜಲಪಾತವನ್ನು ರಾತ್ರಿ 8 ಗಂಟೆಯ ತನಕ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ. ಇದಕ್ಕಾಗಿ ಅಗತ್ಯವಿರುವ ದೀಪದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಲಿದೆ. ಪ್ರವಾಸಿಗರು ಸಹ ದೀಪದ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದರು.
ಸಂಜೆ 7 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಜೋಗ ಜಲಪಾತ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ವರ್ಷವೇ ಇದಕ್ಕಾಗಿ ದೀಪದ ವ್ಯವಸ್ಥೆಯನ್ನು ಮಾಡಲಾಗುತ್ತದೆ. 7 ಗಂಟೆಯೊಳಗೆ ಜೋಗ ತಲುಪಿದ ಪ್ರವಾಸಿಗರು ದೀಪದ ಬೆಳಕಿನಲ್ಲಿ ಜಲಪಾತದ ಸೌಂದರ್ಯವನ್ನು ಸವಿಯಬಹುದು.

ಪ್ರವಾಸೋದ್ಯಮ ಇಲಾಖೆ ಸಹಾಯಕ ಆಯುಕ್ತ ಹೆಚ್. ಎಸ್. ರಾಮಕೃಷ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. "ಪ್ರವಾಸಿಗರ ಬೇಡಿಕೆ ಹಿನ್ನಲೆಯಲ್ಲಿ ದೀಪಗಳನ್ನು ಅಳವಡಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಬೆಂಗಳೂರು ಸೇರಿದಂತೆ ದೂರದ ಪ್ರದೇಶಗಳಿಂದ ಜಲಪಾತ ವೀಕ್ಷಣೆ ಮಾಡಲು ಬರುವವರು ಸರಿಯಾದ ಸಮಯಕ್ಕೆ ಬರಲು ಆಗುತ್ತಿಲ್ಲ. ದೀಪದ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಅವರ ಅನ್ವಯ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ರಾಮಕೃಷ್ಣ ತಿಳಿಸಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಜೋಗ ಜಲಪಾತವನ್ನು ವೀಕ್ಷಣೆ ಮಾಡಲು ಬರುತ್ತಾರೆ. ಈ ಭಾನುವಾರ 10 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು ಎಂಬ ಮಾಹಿತಿ ಇದೆ.











Click it and Unblock the Notifications