Sarvagnanagar Constituency: ಸರ್ವಜ್ಞನಗರ: ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಕೆಜೆ ಜಾರ್ಜ್
ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಸರ್ವಜ್ಞನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ಜೆ ಜಾರ್ಜ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎಂ ಎನ್ ರೆಡ್ಡಿ 53304 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಸರ್ವಜ್ಞನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ನಡದ ಮಹಾಕವಿ ಸರ್ವಜ್ಞನ ಹೆಸರನ್ನು ಹೊಂದಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ವಿರಳ. ನೆರೆಯ ರಾಜ್ಯಗಳಿಂದ ವಲಸೆ ಬಂದ ಜನರೇ ಇಲ್ಲಿನ ನಿವಾಸಿಗಳು. ತಮಿಳು ಮತ್ತು ಉರ್ದು ಭಾಷಿಕರು ಇಲ್ಲಿ ಹೆಚ್ಚಿದ್ದಾರೆ. ಆಧುನಿಕತೆಯ ಬೆಡಗು ಮತ್ತು ಬಡತನದ ಕೊರಗು ಎರಡಕ್ಕೂ ಸಮ ಪ್ರಮಾಣದಲ್ಲಿ ಜಾಗ ಕಲ್ಪಿಸಿರುವ ಸರ್ವಜ್ಞನಗರ ಕ್ಷೇತ್ರ, ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಕೆಲ ಸಮಯದಿಂದ ಚರ್ಚೆಯಲ್ಲಿದೆ.

ಇಲ್ಲಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಸಚಿವ ಕೆ.ಜೆ. ಜಾರ್ಜ್, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಜಾರ್ಜ್ ವಿರುದ್ಧದ ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಈ ಬಾರಿ ಅವರನ್ನು ಸೋಲಿಸಲೇಬೇಕೆಂಬ ಪಣತೊಟ್ಟಿದೆ. ಆದರೆ, ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಮತಗಳು ಹೆಚ್ಚಿರುವ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಬಿಜೆಪಿಗೆ ಸುಲಭವಲ್ಲ.
ಸರ್ವಜ್ಞನಗರದ ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಜತೆಗೆ ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸದ್ಯ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ನಾಗವಾರ, ಎಚ್‌ಬಿಆರ್ ಲೇಔಟ್, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಮತ್ತು ಮಾರುತಿ ಸೇವಾನಗರ ಈ ವಿಧಾನಸಭಾ ಕ್ಷೇತ್ರದಲ್ಲಿರುವ ವಾರ್ಡ್‌ಗಳಾಗಿವೆ.

ಈ ಬಾರಿ ಸ್ಪರ್ಧಿಗಳು ಯಾರು?
ಈ ಬಾರಿಯೂ ಸರ್ವಜ್ಞನಗರದಲ್ಲಿ ಹಾಲಿ ಶಾಸಕ ಕೆಜೆ ಜಾರ್ಜ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದುಕೊಂಡಿದ್ದಾರೆ. ಈಗಾಗಲೇ 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿರುವ ಜಾರ್ಜ್ ಈ ಬಾರಿ ಪರೀಕ್ಷೆಗೆ ಮುಂದಾಗಿದ್ದಾರೆ.
Sarvagnanagar Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಕೆ ಜೆ ಜಾರ್ಜ್(ಕಾಂಗ್ರೆಸ್) | 109,955 | ಎಂ ಎನ್ ರೆಡ್ಡಿ(ಬಿಜೆಪಿ) | 56,651 |
| 2013 | ಕೆ.ಜೆ. ಜಾರ್ಜ್(ಕಾಂಗ್ರೆಸ್) | 69,673 | ಪದ್ಮನಾಭ ರೆಡ್ಡಿ(ಬಿಜೆಪಿ) | 46,820 |
| 2008 | ಕೆ.ಜೆ. ಜಾರ್ಜ್(ಕಾಂಗ್ರೆಸ್) | 45,488 | ಆರ್.ಶಂಕರ್(ಬಿಜೆಪಿ) | 22,880 |
ಬಿಜೆಪಿಯಿಂದ ಬಿಬಿಎಂಪಿ ಮಾಜಿ ಮೇಯರ್ ಪದ್ಮಾನಾಭರೆಡ್ಡಿ ಟಿಕೆಟ್ ಮೊತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷ ಇನ್ನೂ ಸರ್ವಜ್ಞನಗರ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಈ ಬಾರಿ ಚುನಾವಣೆಯ ಬಗ್ಗ ಕುತೂಹಲ ಇದ್ದೇ ಇದೆ.
ಸ್ಥಳೀಯ ಸಮಸ್ಯೆಗಳು
ಕಮ್ಮನಹಳ್ಳಿ, ಮಾರುತಿಸೇವಾನಗರ, ಬಾಣಸವಾಡಿ, ಎಚ್‌ಬಿಆರ್ ಲೇಔಟ್ ಮುಂತಾದವುಗಳಲ್ಲಿ ಸಿರಿವಂತರು ಹಾಗೂ ಮಧ್ಯಮವರ್ಗದ ಜನರು ಹೆಚ್ಚಿದ್ದಾರೆ. ದೊಡ್ಡಮಟ್ಟದ ವ್ಯಾಪಾರ ವಹಿವಾಟು ಈ ಪ್ರದೇಶಗಳಲ್ಲಿ ನಡೆಯುತ್ತದೆ. ಈಗಲೂ ನೆರೆಯ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಆಶ್ರಯ ಪಡೆದುಕೊಳ್ಳುವುದು ಈ ಭಾಗದಲ್ಲಿಯೇ. ಹೀಗಾಗಿ ಜನಸಂಖ್ಯೆ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ.
2013ರ ಫಲಿತಾಂಶ: ಕೆ.ಜೆ. ಜಾರ್ಜ್ 45,488 ಮತ ಪಡೆದಿದ್ದರೆ, ಬಿಜೆಪಿಯ ಆರ್. ಶಂಕರ್ 22,880 ಮತ ಗಳಿಸಿದ್ದರು. ಒಟ್ಟಾರೆ ಮತ ಪ್ರಮಾಣದಲ್ಲಿ ಶೇ 42.14, ಜಾರ್ಜ್ ಪಾಲಾಗಿದ್ದರೆ, ಶಂಕರ್ ಅವರು ಶೇ 21.2 ಪ್ರಮಾಣದ ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲಿ ಕೆ ಜೆ ಜಾರ್ಜ್(ಕಾಂಗ್ರೆಸ್)109,955 ಮತಗಳನ್ನು ಗಳಿಸುವ ಮೂಲಕ ಜಯ ಸಾಧಿಸಿದರೆ, ಎಂ ಎನ್ ರೆಡ್ಡಿ(ಬಿಜೆಪಿ) 56,651 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡರು.

ಮತದಾರರ ಸಂಖ್ಯೆ
ಒಟ್ಟು 3,34,420 ಮತದಾರರು ಇರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಇತರೇ ಸಮುದಾಯದ ವೋಟೇ ನಿರ್ಣಾಯಕ. ಸದ್ಯ ಇಲ್ಲಿ ಮುಸ್ಲಿಂ - 1,20,000, ಇತರೇ ಸಮುದಾಯದ ಮತಗಳು 56,420 ರಷ್ಟಿವೆ. ಎಸ್‌ಸಿ-ಎಸ್‌ಟಿ - 50,000, ಕ್ರಿಶ್ಚಿಯನ್ - 40,000, ಕುರುಬ - 30,000, ಒಕ್ಕಲಿಗ - 20,000 ಮತಗಳಿವೆ. ಇನ್ನು ರೆಡ್ಡಿ - 10,000 ವೋಟ್ ಇದ್ದರೆ, ಲಿಂಗಾಯತರ ವೋಟ್ ಕೇವಲ 8,000ದಷ್ಟಿದೆ.












Click it and Unblock the Notifications