ಒಕ್ಕಲಿಗರ ಸಂಘದ ಚುನಾವಣೆ; ಬೆಂಗಳೂರು ವಿಭಾಗದ ಫಲಿತಾಂಶ
ರಾಮನಗರ, ಡಿಸೆಂಬರ್ 16; ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ಕುತೂಹಲ ಕೆರಳಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತಮಿಳುನಾಡಿನ ಹೊಸೂರು ಸೇರಿದಂತೆ 1 ಕ್ಷೇತ್ರದಿಂದ 15 ಸ್ಥಾನಕ್ಕೆ ಬರೋಬ್ಬರಿ 141 ಅಭ್ಯರ್ಥಿಗಳು ಕಣದಲ್ಲಿ ಇದ್ದರು.
ಬುಧವಾರ ತಡರಾತ್ರಿ ಎರಡು ಗಂಟೆವರೆಗೂ ನಡೆದ ಮತ ಎಣಿಕೆ ನಡೆಯಿತು. ಮತ ಎಣಿಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದ ರೀತಿಯಲ್ಲಿ ಚುನಾವಣಾಧಿಕಾರಿ ನಿಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರತಿ ಎಣಿಕೆ ಕೇಂದ್ರದಲ್ಲಿಯೂ ಸಹ ಸಿಸಿ ಕ್ಯಾಮರಾವನ್ನು ಅಳವಡಿಸಿ, ಕರಾರುವಕ್ಕಾಗಿ ಎಣಿಕೆ ಕಾರ್ಯ ಮಾಡಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಸುಮಾರು 3 ಸಾವಿರ ಜನ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಚುನಾವಣೆ ಮತ ಎಣಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದ್ದ ಹಲವು ಪ್ರತಿಷ್ಠಿತ ಅಭ್ಯರ್ಥಿಗಳು, ಎಣಿಕೆ ಕಾರ್ಯ ಪ್ರಗತಿ ಹೊಂದುತ್ತಾ ಹೋದಂತೆ ಹಿನ್ನಡೆ ಅನುಭವಿಸಿದರು.

15 ಸ್ಥಾನಗಳಿಗೆ 141 ಮಂದಿ ಅಭ್ಯರ್ಥಿಗಳಿದ್ದರು. ತಮಗೆ ಬೇಕಾದ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಲು ಮತದಾರ ಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ತಿರಸ್ಕಾರವಾಗಿದ್ದು, ಒಕ್ಕಲಿಗರ ಸಂಘದ ಚುನಾವಣೆ ಅಭ್ಯರ್ಥಿಗಳಲ್ಲಿ ದಿಗಿಲು ಮೂಡಿಸಿತ್ತು.
ಕಣದಲ್ಲಿರುವ 141 ಅಭ್ಯರ್ಥಿಗಳಲ್ಲಿ ನಮ್ಮನ್ನೇ ಗುರುತಿಸಿ ಅದ್ಯಾವ ರೀತಿಯಲ್ಲಿ ಮತ ಚಲಾಯಿಸಬಹುದು? ಎಂಬ ಆತಂಕವು ಅಭ್ಯರ್ಥಿಗಳಲ್ಲಿ ಮನೆ ಮಾಡಿತ್ತು. ಮತದಾರರು ಹೆಚ್ಚು ಮತಗಳು ಅಸಿಂಧುವಾಗದ ರೀತಿಯಲ್ಲಿ ಮತದಾನ ಮಾಡಿ, ತಮ್ಮ ಬುದ್ಧಿವಂತಿಕೆಯನ್ನು ಮೆರೆದಿರುವುದು ಈ ಬಾರಿ ಚುನಾವಣೆಯ ವಿಶೇಷ.

ಕೆಂಚಪ್ಪಗೌಡ ತಂಡಕ್ಕೆ 10 ಸ್ಥಾನ; ಅಂತಿಮವಾಗಿ ಕೆಂಚಪ್ಪಗೌಡ ತಂಡ 10 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಕ್ರಮ ಸಾಧಿಸಿತು ಎಂಬುದು ಗಮನಾರ್ಹ ಸಂಗತಿ. ಕೆಂಚಪ್ಪಗೌಡ ತಂಡದಿಂದ ಹೆಚ್. ಎನ್. ಅಶೋಕ್, ಕೆಂಚಪ್ಪಗೌಡ, ಆರ್. ಪ್ರಕಾಶ್, ದೇವರಾಜ್ (ಹಾಪ್‌ಕಾಮ್ಸ್), ಎಲ್. ಶ್ರೀನಿವಾಸ್, ಮಾರೇಗೌಡ, ರಾಜಶೇಖರಗೌಡ, ಸುರೇಶ್, ವೆಂಕಟರಾಮೇಗೌಡ, ನಾರಾಯಣಸ್ವಾಮಿ ಆಯ್ಕೆಯಾದರು.
ಇತರರ ತಂಡಗಳಿಂದ ಡಾ. ಆಂಜನಪ್ಪ, ಜಯಮುತ್ತು, ಉಮಾಪತಿ, ಹನುಮಂತಯ್ಯ, ಪುಟ್ಟಸ್ವಾಮಿ ಆಯ್ಕೆಯಾದರು. ಇದರಲ್ಲಿ ಡಾ. ಆಂಜನಪ್ಪ 68,938 ಮತ ಪಡೆದು ದಾಖಲೆ ಮಾಡಿದರು. ಕೆಂಚಪ್ಪಗೌಡ ತಂಡದ ನಾಯಕ ಕೆಂಚಪ್ಪಗೌಡ 58,066 ಮತಗಳನ್ನು ಪಡೆದರು, ಅವರ ತಂಡದ ಅಶೋಕ್ ಹೆಚ್. ಎನ್. 61,892 ಮತ ಪಡೆದು ಎರಡನೇ ಸ್ಥಾನ ಪಡೆದರು.
ಡಿ. ಎಂ. ವಿಶ್ವನಾಥಗೆ ಸೋಲು; ಒಕ್ಕಲಿಗರ ಸಂಘದ ಚುನಾವಣೆ ಪ್ರಾರಂಭದಿಂದಲೂ ಬಾರಿ ನಿರೀಕ್ಷೆ ಮೂಡಿಸಿದ್ದ ದೂಂತೂರು ವಿಶ್ವನಾಥ್ ಕಡಿಮೆ ಅಂತರದಿಂದ ಸೋಲು ಅನುಭವಿಸಿದರು. ಮತ ಎಣಿಕೆ ಪ್ರಾರಂಭದಲ್ಲಿ ಗೆಲುವಿನ ಸನಿಹವಿದ್ದ ಡಿ. ಎಂ. ವಿಶ್ವಾನಾಥ್ ಅಂತಿಮವಾಗಿ 38,480 ಮತ ಪಡೆದು 16ನೇ ಅವರಾಗಿ ಗೆಲುವಿನ ಸನಿಹಕ್ಕೆ ಬಂದು ಸೋಲು ಅನುಭವಿಸಿದರು.
ರಾಜಕೀಯದ ದುರಂತ ನಾಯಕ ಎಂದೇ ಬಿಂಬಿತರಾಗಿದ್ದ ಡಿ. ಎಂ. ವಿಶ್ವನಾಥ್ ಒಕ್ಕಲಿಗರ ಸಂಘಕ್ಕೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡುದಾಗ ಎಲ್ಲಡೇ ಡಿ. ಎಂ. ವಿಶ್ವನಾಥ ಪರವಾದ ಅಲೆ ಕಂಡು ಬಂತು. ಅಂತಿಮವಾಗಿ ಚುನಾವಣೆ ಹಿಂದಿನ ದಿನಗಳಲ್ಲಿ ಹಣವಂತರು ಮತದಾರನಿಗೆ ತೋರಿದ ಅಮಿಷಗಳ ಮುಂದೆ ಮತದಾರ ಮನಸ್ಸಿನಲ್ಲಿದ್ದ ವಿಶ್ವನಾಥ ಪರವಾದ ಅಲೆ ಮಂಕಾಯಿತು.
ಜಿಲ್ಲೆಯ ನಾಲ್ಕು ಮಂದಿ ಗೆಲುವು; ಬಹಳ ಜಿದ್ದಾಜಿದ್ದಿನಿಂದ ನಡೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ 4 ಮಂದಿ ಅಭ್ಯರ್ಥಿಗಳ ಕೈ ಹಿಡಿದ್ದಾರೆ ಒಕ್ಕಲಿಗ ಮತದಾರರು. ಅದರಲ್ಲೂ ಚನ್ನಪಟ್ಟಣ ಮೂಲದ ಮೂವರು ಅಭ್ಯರ್ಥಿಗಳ ಗೆಲ್ಲಿಸಿರುವುದು ಚುನಾವಣೆಯ ವಿಶೇಷ.
ಮಾಗಡಿಯ ಅಶೋಕ್ (ತಮ್ಮಾಜಿ ), ಚನ್ನಪಟ್ಟಣ ಮೂಲದ ಜಯಮುತ್ತು, ದೇವಾರಾಜು (ಆಪ್ ಕಾಮ್ಸ್) ಹಾಗೂ ವೆಂಕಟರಾಮೇಗೌಡ ಮೇಲೆ ಒಕ್ಕಲಿಗ ಮತದಾರರು ಆಶೀರ್ವಾದ ಮಾಡಿದ್ದಾರೆ. ಅದರಲ್ಲೂ ಜಯಮುತ್ತು ಬಿಟ್ಟರೆ ಇನ್ನೂಳಿದ ಮೂರು ಮಂದಿ ಒಕ್ಕಲಿಗರ ಸಂಘಕ್ಕೆ ಹೊಸ ಮುಖಗಳು.












Click it and Unblock the Notifications