ಚನ್ನಪಟ್ಟಣ: 2 ಬಾರಿ ಸೋತವರೇ ಮುಖಾಮುಖಿ, ಹ್ಯಾಟ್ರಿಕ್ ಸೋಲು ಯಾರಿಗೆ?
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ರಾಜಕಾರಣದಲ್ಲಿ ಸದಾ ಗೆಲ್ಲುವ ಕುದುರೆಗೆ ಮಣೆ ಹಾಕವುದು ವಾಡಿಕೆ. ಚುನಾವಣೆ ಬಂತೆಂದರೆ, ಗೆಲ್ಲುವ ನಾಯಕರು, ಜಾತಿ ಲೆಕ್ಕಾಚಾರ, ಪ್ರಭಾವಿ, ಹಣ ಬಲ ಹೀಗೆ ಎಲ್ಲವನ್ನು ಅಳೆದು ತೂಗಿ ಚುನಾವಣೆಗೆ ಅವಕಾಶ ಕೊಡಿಸಲಾಗುತ್ತದೆ. ಆದರೆ ಈ ಬಾರಿಯ ಉಪಚುನಾವಣೆ ಕೊಂಚ ಭಿನ್ನವಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಇಬ್ಬರು ನಾಯಕರು ಎರಡು ಭಾರಿ ಸೋತರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಣಕ್ಕಿಳಿದ ಈ ಎರಡು ಸೋತ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಹ್ಯಾಟ್ರಿಕ್ ಸೋಲಾಗಲಿದೆ.
ಹೈವೋಲ್ಟೇಜ್ ರಣಕಣವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ ಅವರು ಕಣಕ್ಕಿಳಿದಿದ್ದಾರೆ. ಇಂದು ಶುಕ್ರವಾರ ಅಕ್ಟೋಬರ್ 25 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಹಿನ್ನೆಲೆಯಲ್ಲಿ ಭರ್ಜರಿ ರೋಡ್ ಶೋ ಮೂಲಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ವಿಶೇಷವೆಂದರೆ ಈ ಇಬ್ಬರು ಅಭ್ಯರ್ಥಿಗಳು ಕಳೆದ ಎರಡು ಬಾರಿಯು ನಿರಂತರವಾಗಿ ಸೋಲು ಕಂಡ ಅಭ್ಯರ್ಥಿಗಳಾಗಿದ್ದಾರೆ. ಯಾರೇ ಒಬ್ಬರು ಸೋತರು ಅವರಿಗೆ ಹ್ಯಾಟ್ರಿಕ್ ಸೋಲಾಗಲಿದೆ ಎಂಬುದು ಮತ್ತೊಂದು ವಿಶೇಷ.
ಇಬ್ಬರಿಗೂ ಸೋತ ಅನುಭವ, ಗೆಲ್ಲಬೇಕಾದ ಅನಿವಾರ್ಯತೆ
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಂದ ಇದೇ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಹೀನಾಯವಾಗಿ ಪರಾಭವಗೊಂಡಿದ್ದರು. ಅದಾದ ಬಳಿಕ ಮತ್ತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎ. ಇಕ್ಬಾಲ್ ಹುಸೇನ್ ಅವರ ವಿರುದ್ಧ ಸೋತಿದ್ದರು.
ಇತ್ತ 2018ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಚನ್ನಪಟ್ಟಣ ಕ್ಷೇತ್ರದಿಂದ ಸೋತಿದ್ದ ಸೈನಿಕ ಸಿ.ಪಿ.ಯೋಗೇಶ್ವರ ಅವರು, ಮತ್ತೆ 2023 ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯಿಂದ ನಿಂತು ಸೋತಿದ್ದರು. ಇದೀಗ ಮತ್ತೆ ಅದೃಷ್ಟ ಪರೀಕ್ಷೆಗೆ ಮತ್ತದೇ ಕ್ಷೇತ್ರದಿಂದ ಕಣಕ್ಕಿಳಿದಿರುವುದು ವಿಶೇಷ. ಈ ಇಬ್ಬರಿಗೂ ಗೆಲ್ಲುವ ಅವಶ್ಯತೆ ಹೆಚ್ಚಿದೆ.

ಒಂದೇ ಕ್ಷೇತ್ರದಲ್ಲಿ ಸೋತವರು ಮುಖಾಮುಖಿ, ಏನಾಗುತ್ತೋ?
ಇಬ್ಬರು ಎರಡು ಬಾರಿ ಚುನಾವಣೆಗಳಲ್ಲಿ ಪರಾಭವಗೊಂಡಿದ್ದು, ಮತ್ತವರೇ ಒಂದೇ ಕ್ಷೇತ್ರದಲ್ಲಿ ಮುಖಾ ಮುಖಿ ಆಗಿದ್ದಾರೆ. ಹೀಗೆ ಒಂದಷ್ಟು ಕಾರಣಗಳಿಂದಲೇ ಚನ್ನಪಟ್ಟಣ ಮತ್ತಷ್ಟು ಆಸಕ್ತಿದಾಯಕ, ರಾಜಕೀಯ ರಣಕಣವಾಗಿ ಬದಲಾಗುತ್ತಿದೆ. ಚನ್ನಪಟ್ಟಣದ ಜನರು ಯಾರಿಗೆ ಆಶೀರ್ವದಿಸುತ್ತಾರೆಯೋ ಅವರಿಗೆ ಮೂರನೇ ಸೋಲು ತಪ್ಪಲಿದೆ.
ಒಬ್ಬರಿಗೆ ಹ್ಯಾಟ್ರಿಕ್ ಸೋಲು ಪಕ್ಕಾ..!
ಇಬ್ಬರಲ್ಲಿ ಒಬ್ಬರಿಗೆ ಹ್ಯಾಟ್ರಿಕ್ ಸೋಲು ಕಟ್ಟಿಟ್ಟ ಬುತ್ತಿ ಎನ್ನಬಹುದು. ಅದನ್ನು ತಪ್ಪಿಸಲೆಂದೆ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರೊಂದಿಗೆ ರಣತಂತ್ರ ರೂಪಿಸಿದ್ದಾರೆ. ಗೆಲ್ಲುವ ವಿಶ್ವಾಸದ ಜೊತೆಗೆ ಈ ಹಿಂದಿನಂತೆ ಸೋಲಿಸಲು ಪಣತೊಟ್ಟಿದ್ದಾರೆ. ಏಕೆಂದರೆ ಇದರಲ್ಲಿ ಮಗನ ರಾಜಕೀಯ ಭವಿಷ್ಯ ಅಡಗಿದೆ ಎಂಬ ಸ್ಪಷ್ಟ ನಿರ್ಧಾರ ಅವರಲ್ಲಿದೆ.
ಇನ್ನೂ ಕಾಂಗ್ರೆಸ್ ಐದು ಗ್ಯಾರೆಂಟಿಗಳ ಪ್ರಯೋಜನ, ಜೆಡಿಎಸ್ ಬಿಜೆಪಿ ಜೊತೆಗಿನ ಮೈತ್ರಿ ಸೇರಿದಂತೆ ಒಂದಷ್ಟು ವಿಚಾರಗಳನ್ನು ಇಟ್ಟುಕೊಂಡು ತಮ್ಮ ಅಭ್ಯರ್ಥಿ ಪರ ಮತಯಾಚಿಸಲಿದೆ. ಅಲ್ಲದೇ ಸಿಪಿ ಯೋಗೇಶ್ವರ ಅವರು ಒಂದಷ್ಟು ದಿನಗಳ ಕಾಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಕಳೆದ ಮೂರು ತಿಂಗಳಿಂದ ಕ್ಷೇತ್ರದ ಜನರನ್ನು ಸಂಪರ್ಕಿಸಿದ್ದಾರೆ. ಇದು ಸಹ ಕಾಂಗ್ರೆಸ್ 'ಕೈ' ಹಿಡಿಯಬಹುದು ಎನ್ನಲಾಗುತ್ತಿದೆ.
ಈ ಇಬ್ಬರು ಸೋತ ಅಭ್ಯರ್ಥಿಗಳಾದರು ಅವರ ಹಿಂದೆ ಪ್ರಭಾವ, ಪ್ರಭಾವಿ ರಾಜಕಾರಣಗಳ ಬೆಂಬಲ ಇದೆ. ಹೀಗಾಗಿ ಒಬ್ಬರು ಗೆಲ್ಲಬೇಕು. ಒಬ್ಬರು ಸೋಲಬೇಕು. ವಿಜಯಮಾಲೆ ಯಾರಿಗೆ ಎಂದು ತಿಳಿಯಲು ನವೆಂಬರ್ 23ರವರೆಗೆ ಕಾಯಬೇಕಿದೆ.












Click it and Unblock the Notifications