ರಾಮನಗರ: ತಿಂಡಿ ಪ್ರಿಯರ ತನು-ಮನ ತಣಿಸಿದ ರುಚಿ ಸಂತೆ
ರಾಮನಗರ, ಜುಲೈ 18: ನಗರದ ವಾಸವಿ ಯೂತ್ಸ್ ಪೋರಂನ ಆಯೋಜನೆ ಮಾಡಿದ್ದ ರುಚಿ ಸಂತೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳಿದ್ದವು. ದೃಷ್ಟಿಹಾಯಿಸಿದ ಕಡೆಯಲ್ಲೆಲ್ಲಾ ಘಮಘಮಿಸುವ ಬಣ್ಣಬಣ್ಣದ ತರಾವರಿ ಭಕ್ಷ್ಯಗಳು, ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು.
ವಾಸವಿ ಸಮಾಜದ ವಿಶಿಷ್ಟ, ವಿಭಿನ್ನ ರುಚಿ ಪರಿಶುದ್ಧವಾದ ಮನೆಯ ತಿಂಡಿಗಳ ರುಚಿಯನ್ನು ಇತರೆ ಸಮಾಜಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿದ್ದ ರುಚಿ ಸಂತೆಗೆ ತಿಂಡಿ ಪ್ರಿಯರಿಂದ ಉತ್ತಮ ಸ್ಪಂದನೆ ಸಿಕ್ಕಿತು.
ಪಟ್ಟಣದ ವಾಸವಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ರುಚಿ ಸಂತೆಗೆ ನೂರಾರು ಜನರು ಭೇಟಿ ನೀಡಿದರು. ಖಾದ್ಯಗಳ ಸವಿಯನ್ನು ಸವಿದು, ವಾಸವಿ ಸಮಾಜದ ವಿಶಿಷ್ಟ ತಿಂಡಿಗಳ ಪರಿಚಯ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದರು.
ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತದೆ ಅಂದರೆ ಬಿಡೋದಕ್ಕಾಗುತ್ತಾ. ಒಂದೇ ಸೂರಿನಡಿ ಅದರಲ್ಲೂ (ವಾಸವಿ ಸಮಾಜ ) ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತದೆ ಅಂದರೆ ಇದ್ದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು. ಜನ ಮುಗಿಬಿದ್ದು ತನ-ಮನ ತಣಿಸಿಕೊಂಡರು.

ಆಹಾರ ಪ್ರಿಯರ ಗಮನ ಸೆಳೆದ ವಿಶಿಷ್ಟ ಖಾದ್ಯಗಳು
ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಾದ ಒತ್ತು ಶಾವಿಗೆ, ಪಡ್ಡು, ತಟ್ಟೆ ಇಡ್ಲಿ, ಕೆಂಚ್ ಇಡ್ಲಿ, ವಿವಿಧ ಬಗೆಯ ಹಲ್ವಗಳು, ಬದನೆಕಾಯಿ ಬಜ್ಜಿ, ಬೇಬಿ ಕಾರ್ನ್ ಚಟ್ಪಟ್ ಚಿಲ್ಲಿ, ಬೇಬಿ ಆಲೂ, ಮಸಾಲಾ ಪುರಿ, ಚುರ್‌ಮುರಿ, ನಿಪ್ಪಟ್ಟು ಬರ್ಗರ್, ಕೇಕ್ ಐಸ್‌ಕ್ರೀಂ ಸೇರಿದಂತೆ ಆರ್ಯವೈಶ್ಯರ ಸಮಾಜದ ವಿಶಿಷ್ಟ ಖಾದ್ಯಗಳು ಮತ್ತಿತರ ತಿನಿಸುಗಳು ತಿಂಡಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದವು.

ಬಾಯಲ್ಲಿ ನೀರೂರಿಸಿದ ಕುರಕಲು ತಿಂಡಿಗಳು
ಆರ್ಯವೈಶ್ಯರ ಸಂಸ್ಕೃತಿ, ಆಹಾರ ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ರುಚಿ ಸಂತೆ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಶೆಟ್ಟರ ಮನೆಯ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳ ಅನಾವರಣವಾಗಿತ್ತು. ಬಗೆಬಗೆಯ ನಿಪ್ಟಟ್ಟು, ಚಕ್ಕುಲಿ, ಕೋಡುಬಳೆ, ಪಡ್ಡು ಸೇರಿದಂತೆ ಬಾಯಲ್ಲಿ ನೀರೂರಿಸುವ ಆರ್ಯವೈಶ್ಯರ ಸ್ವಾದಿಷ್ಟಕರ ತಿನಿಸಿಗಳು ಇಲ್ಲಿತ್ತು.
ಜನರಂತು ಬಹಳ ಉತ್ಸಾಹದಿಂದ ಆಹಾರ ಮೇಳದ ಕಡೆಗೆ ನುಗ್ಗುತ್ತಿದ್ದರು. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ವಿವಿಧ ವಯೋಮಾನದವರು ರುಚಿ ಸಂತೆಗೆ ಬಂದಿದ್ದರು. ಅಲ್ಲದೇ ಬಂದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಸ್ಥಳದಲ್ಲಿಯೇ ಆರ್ಯವೈಶ್ಯ ಬಾಣಸಿಗರು ತಯಾರಿಸಿಕೊಡುತ್ತಿದ್ದರು.

ಎರಡು ವರ್ಷಗಳ ನಂತರ ಆಯೋಜನೆ
ರುಚಿ ಸಂತೆಯ ಬಗ್ಗೆ ಮಾತನಾಡಿದ ವಾಸವಿ ಸಂಘದ ಕಾರ್ಯದರ್ಶಿ ಹೇಮಾವತಿ, "ಐದು ವರ್ಷ ಯಶಸ್ವಿಯಾಗಿ ಹಮ್ಮಿಕೊಂಡಿದ್ದ ವಾಸವಿ ಯೂತ್ಸ್ ಪೋರಂನ ಈ ಆಹಾರ ಮೇಳ, ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಕೋವಿಡ್ ಹಾವಳಿ ಕಡಿಮೆಯಾದ ಹಿನ್ನಲೆಯಲ್ಲಿ ಇದೀಗ ಮತ್ತೆ ಆರ್ಯವೈಶ್ಯ ಜನಾಂಗದ ಸಂಪ್ರದಾಯಿಕ ಅಡುಗೆ ಶೈಲಿಯನ್ನ ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಈ ರುಚಿ ಸಂತೆಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ" ಎಂದರು.

ನಿರೀಕ್ಷೆಗೂ ಮೀರಿ ಯಶಸ್ವಿಯಾದ ರುಚಿ ಸಂತೆ
ರುಚಿ ಸಂತೆಯಲ್ಲಿ ಮುಗಿಬಿದ್ದು ಜನರು ವಿವಿಧ ಬಗೆಯ ತಿಂಡಿಗಳ ಟೇಸ್ಟ್ ಮಾಡಿದರು. ಹೋಟೆಲ್‌ನ ತಿಂಡಿ ತಿನಿಸುಗಳಿಂದ ಬೇಸತ್ತಿದ್ದ ಜನರು ಇಲ್ಲಿಗೆ ಭೇಟಿ ನೀಡಿ 11ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಆರ್ಯವೈಶ್ಯ ಜನಾಂಗದ ಸಂಪ್ರದಾಯಿಕ ಖಾದ್ಯಗಳ ರುಚಿ ನೋಡಿದರು. ಅಲ್ಲದೇ ಆರ್ಯವೈಶ್ಯ ತಿನಿಸುಗಳನ್ನ ಪ್ರಚಾರ ಮಾಡೋ ದೃಷ್ಟಿಯಿಂದ ಹಮ್ಮಿಕೊಂಡಿದ್ದ ರುಚಿ ಸಂತೆಗೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ ಸಾರ್ವಜನಿಕರು ರುಚಿ ಸಂತೆಯ ಶುಚಿ ರುಚಿಯ ಆಹಾರ ಸವಿಯಲು ಬಹಳ ಖುಷಿಯಾಗುತ್ತಿದೆ ಎಂದು ಮೇಳದ ಬಗ್ಗೆ ಗ್ರಾಹಕರಾದ ಮಹಾಲಕ್ಷ್ಮಿ ಮತ್ತು ಚೈತ್ರಾ ಸಂತಸ ವ್ಯಕ್ತಪಡಿಸಿದ್ದರು.












Click it and Unblock the Notifications