Rikki Rai: ನನ್ನ ಮೇಲೆ ದಾಳಿ ಮಾಡಿಸಿದ್ದು ಅವರೇ ಎಂದ ಡಾನ್ ಮುತ್ತಪ್ಪ ರೈ ಮಗ
ಬೆಂಗಳೂರು ಅಂಡರ್‌ವರ್ಲ್ಡ್ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬಿಡದಿ ಬಳಿ ಗುಂಡಿನ ದಾಳಿ ನಡೆದಿತ್ತು. ಈ ಕೊಲೆ ಯತ್ನದಲ್ಲಿ ರಿಕ್ಕಿ ಅವರು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗಿತ್ತು. ಇದೀಗ ತಮ್ಮ ಮೇಲೆ ಕೊಲೆ ನಡೆಸಿದವರು ಯಾರು ಎಂಬುದನ್ನು ಸ್ವತಃ ರಿಕ್ಕಿ ರೈ ಅವರೇ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಫೈರಿಂಗ್ನಲ್ಲಿ ಗಾಯಗೊಂಡಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರ ಮುಂದೆ ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಬಿಡದಿ ಫಾರ್ಮ್‌ಹೌಸ್‌ನಿಂದ ಹೊರಬರುತ್ತಿದ್ದ ವೇಳೆ ರಿಕ್ಕಿ ಮೇಲೆ ಗುಂಡಿನ ದಾಳಿ ನಡೆದಿತ್ತು. ಉದ್ದೇಶಪೂರ್ವಕವಾಗಿ ರಿಕ್ಕಿ ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಅವರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಈ ಕೇಸ್ ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆ ಯತ್ನದ ಸಂಬಂಧ ರಿಕ್ಕಿ ಅವರಿಂದಲೇ ಮೊದಲಿಗೆ ಮಾಹಿತಿ ಕಲೆ ಹಾಕಿರುವ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ.

ಪೊಲೀಸರ ಮುಂದೆ ಸ್ಫೋಟಕ ವಿಚಾರಗಳನ್ನು ರಿವೀಲ್ ಮಾಡಿರುವ ರಿಕ್ಕಿ ರೈ, ಆಸ್ತಿ ವಿಚಾರಕ್ಕೆ ಗುಂಡಿನ ದಾಳಿಯಾಗಿದೆ ಎಂದಿದ್ದಾರೆ. ನನ್ನ ಮೇಲೆ ನಡೆದ ಈ ದಾಳಿಯ ಹಿಂದೆ ರಾಕೇಶ್ ಮಲ್ಲಿ, ಅನುರಾಧಾ, ನಿತೀಶ್ ಶೆಟ್ಟಿ, ವೈದ್ಯನಾಥನ್ ಅವರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ನಾನು ರಷ್ಯಾದಲ್ಲಿದ್ದೆ, ಜಮೀನು ವಿವಾದ ಸಂಬಂಧ ಕೋರ್ಟ್‌ನಲ್ಲಿ ಕೇಸ್ ಇದ್ದ ಕಾರಣ ನಾನು ನಾನು ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದೆ. ಅಲ್ಲದೆ ನಾನು ಬೆಂಗಳೂರಿಗೆ ಬಂದಾಗ ಹೆಚ್ಚಾಗಿ ಸದಾಶಿವನಗರ ಹಾಗೂ ಬಿಡದಿಯಲ್ಲಿರುವ ಮನೆಗಳಲ್ಲಿ ಉಳಿಯುತ್ತೇನೆ. ನಿನ್ನೆ ಬಿಡದಿಯಿಂದ ಸದಾಶಿವನಗರದ ಮನೆಗೆ ಹೋಗುತ್ತಿದ್ದ ಮೇಲೆ ನನ್ನ ಮೇಲೆ ದಾಳಿ ನಡೆದಿದೆ. ಬುಲೆಟ್ ತಗುಲಿ ಗಾಯಗೊಂಡಿದ್ದ ನನ್ನನ್ನು ಕಾರು ಚಾಲಕ ಹಾಗೂ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದರು ಎಂದು ರಿಕ್ಕಿ ರೈ ವಿವರಿಸಿದ್ದಾರೆ.
ಮತ್ತೊಂದೆಡೆ ಈ ಘಟನೆ ಸಂಬಂಧ ರಿಕ್ಕಿ ರೈ ಕಾರು ಚಾಲಕ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಿಕ್ಕಿ ರೈ ಹೇಳಿದಂತೆ ಈ ನಾಲ್ವರ ವಿರುದ್ಧವೇ ಎಫ್ಐಆರ್ ಕೂಡ ದಾಖಲಾಗಿದ್ದು, ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕೇಸ್‌ನ ಆರೋಪಿಯಾದ ಅನುರಾಧಾ ಸದ್ಯ ವಿದೇಶದಲ್ಲಿದ್ದಾರಂತೆ.

ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಡಿಸಿಎಂ ಡಿಕೆ ಶಿವಕುಮಾರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್ ನಾನು ಯಾರಿಗೂ ಯಾವ ಫೋನ್ ಕರೆಯೂ ಮಾಡಿಲ್ಲ ಎಂದಿದ್ದಾರೆ. ಈ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದಿರುವುದರಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications