ಟೋಲ್ ತಪ್ಪಿಸಿಕೊಂಡು ಓಡಾಡುವವರಿಗೆ ಬಿಗ್ ಶಾಕ್
ರಾಜ್ಯದಲ್ಲಿ ಹಲವು ಹೆದ್ದಾರಿಗಳು ಟೋಲ್‌ಗಳನ್ನು ನಿರ್ಮಿಸಲಾಗಿದೆ. ಸುಖರಕ ಹಾಗೂ ನೆಮ್ಮದಿಯ ಪ್ರಯಾಣಕ್ಕಾಗಿ ವಾಹನ ಮಾಲೀಕರಿಗೆ ಟೋಲ್ ಶುಲ್ಕ ಕೂಡ ಇದೆ. ಆದರೆ ಇದು ಕೆಲವರ ಪಾಲಿಗೆ ದುಬಾರಿ ಎಂಬ ಕಾರಣಕ್ಕೆ ಸುತ್ತಿ ಬಳಸಿ ಟೋಲ್ ತಪ್ಪಿಸಿಕೊಂಡು ಸಾಗುವ ಕಿಲಾಡಿ ಮಂದಿ ಕೂಡ ಇದ್ದಾರೆ. ಇಂತಹ ವಾಹನ ಮಾಲೀಕರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬಿಸಿ ಮುಟ್ಟಿಸಿದೆ.
ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿಗಳಲ್ಲಿರುವ ಟೋಲ್‌ಗಳಿಂದ ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳನ್ನು ಬಳಸುವುದು ಬಳಿಕ ಹೆದ್ದಾರಿಗೆ ಎಂಟ್ರಿ ಕೊಡುವ ಚಾಲಾಕಿಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹದ್ದಿನಕಣ್ಣಿಟ್ಟಿದ್ದು, ಇದೀಗ ಶಾಕ್ ಕೂಡ ನೀಡಿದೆ. ಮುಖ್ಯವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಟೋಲ್ ತಪ್ಪಿಸಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವ ದೂರುಗಳು ಹೆಚ್ಚಾಗಿ ಕೇಳಿಬಂದಿವೆ. ಈ ಹಿನ್ನೆಲೆ ಪ್ರಾಧಿಕಾರವು ವಾಹನ ಸವಾರರಿಗೆ ಶಾಕ್ ನೀಡಿದೆ.

ಈ ಮಾರ್ಗದಲ್ಲಿ ಮೈಸೂರಿನಿಂದ ಬರುತ್ತಿದ್ದ ವಾಹನ ಸವಾರರು ಬಿಡದಿ ಬಳಿ ಸರ್ವಿಸ್ ರಸ್ತೆ ಪ್ರವೇಶಿಸುವ ಮೂಲಕ ಟೋಲ್ ಗೇಟ್‌ನಿಂದ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಹಲವು ದೂರುಗಳ ಬಂದ ಹಿನ್ನೆಲೆ, ಕಳ್ಳದಾರಿಯನ್ನು ಬಂದ್ ಮಾಡುವ ಮೂಲಕ ಪ್ರಾಧಿಕಾರ ಟಕ್ಕರ್ ಕೊಟ್ಟಿದೆ. ಜಾಲಿಯಾಗಿ ಹೈವೇಲಿ ಸಂಚರಿಸಿ, ಬಳಿಕ ಸರ್ವೀಸ್ ರಸ್ತೆ ಮೂಲಕ ಮಾರ್ಗ ಬದಲಿಸಿಕೊಂಡು ಬಳಿಕ ಟೋಲ್ ಗೇಟ್ ಪ್ರವೇಶಿಸದೆ ಮಾರ್ಗದಲ್ಲಿ ಮುಂದುವರಿಯುತ್ತಿದ್ದರು. ಬಹಳ ದಿನಗಳಿಂದ ಈ ಕಳ್ಳಾಟ ನಡೆಯುತ್ತಿದ್ದು, ಇದಕ್ಕೆ ಕೊನೆಗೂ ಬ್ರೇಕ್ ಹಾಕಿದ್ದಾರೆ.
ಎಕ್ಸ್‌ಪ್ರೆಸ್‌ವೇನಲ್ಲೇ ಸಂಚರಿಸುತ್ತಿದ್ದ ಕೆಲ ವಾಹನ ಸವಾರರು ಶೇಷಗಿರಿಹಳ್ಳಿ ಬಳಿ ಇರುವ ಟೋಲ್ ಗೇಟ್‌ನಲ್ಲಿ ಶುಲ್ಕ ಪಾವತಿಸುತ್ತಿರಲಿಲ್ಲ. ಬಳಿಕ ಸರ್ವೀಸ್ ರಸ್ತೆ ಮೂಲಕ ರಾಜಧಾನಿ ಬೆಂಗಳೂರನ್ನು ತಲುಪುತ್ತಿದ್ದರು. ಇದು ಪ್ರಾಧಿಕಾರದ ಗಮನಕ್ಕೆ ಬಂದ ಹಿನ್ನೆಲೆ ಕೂಡಲೇ ಆ ಮಾರ್ಗದಲ್ಲಿ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯನ್ನು ಬಂದ್ ಮಾಡಿ ಕಡಿವಾಣ ಹಾಕಿದ್ದಾರೆ. ಅಲ್ಲದೆ ಈಗ ವಾಹನಗಳ ಪ್ರವೇಶಕ್ಕೆ ಮಾತ್ರ ದಾರಿ ಇದ್ದು, ಅಲ್ಲಿದ್ದ ನಿರ್ಗಮನ ಮಾರ್ಗವನ್ನು ಕೂಡ ಬಂದ್ ಮಾಡಲಾಗಿದೆ.
ಇಲ್ಲಿವರೆಗೆ ವಾಹನ ಸವಾರರು ಆಡುತ್ತಿದ್ದ ಕಳ್ಳಾಟಕ್ಕೆ ಪ್ರಾಧಿಕಾರವು ಕಡಿವಾಣ ಹಾಕಿದ್ದು, ಇದರಿಂದ ಹಲವರು ಗರಂ ಕೂಡ ಆಗಿದ್ದಾರೆ. ರಸ್ತೆ ಬಂದ್ ಮಾಡಿದ ಕಾರಣ ಕೆಲ ವಾಹನ ಸವಾರರು ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರಂತೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಈ ರೀತಿ ರಸ್ತೆ ಬಂದ್ ಮಾಡಿರುವ ಕ್ರಮ ಸರಿಯಲ್ಲ, ಈಗ ಪಕ್ಕದ ರಾಮನಗರದಿಂದ ಬೆಂಗಳೂರಿಗೆ ಹೋಗುವವರು ಕೂಡ ದುಬಾರಿ ಟೋಲ್ ಕಟ್ಟಬೇಕೇನ್ರೀ..? ಎಂದು ಕಣ್ಣು ಕೆಂಪು ಮಾಡಿಕೊಂಡಿದ್ದಾರಂತೆ.

ಸದ್ಯ ಈ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಬೆಂಗಳೂರು ಹಾಗೂ ಮೈಸೂರು ನಡುವೆ ಸುಗಮ ಸಂಚಾರ ಹಾಗೂ ಕಡಿಮೆ ಅವಧಿಯಲ್ಲಿ ತಲುಪುವ ಉದ್ದೇಶದೊಂದಿಗೆ ನಿರ್ಮಿಸಲಾಗಿದೆ. ಆದರೆ, ಇದು ಸಂಚಾರಕ್ಕೆ ಮುಕ್ತವಾದಾಗಲಿಂದಲೂ ಹಲವು ಕಾರಣಗಳಿಗೆ ಸುದ್ದಿಯಾಗುತ್ತಲೇ ಇದೆ. ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸಿ ನೂರಾರು ಮಂದಿ ಅಪಘಾತದಲ್ಲಿ ಜೀವಕಳೆದುಕೊಂಡರೆ, ಇಲ್ಲಿ ಮಿತಿಮೀರಿದ ವೇಗದಲ್ಲಿ ಸಂಚರಿಸಿದ ವಾಹನಗಳಿಗೆ ಭಾರಿ ದಂಡ ಕೂಡ ಹಾಕಲಾಗುತ್ತಿದ್ದು, ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿದೆ.












Click it and Unblock the Notifications