ಕೆಂಪೇಗೌಡರ ಪ್ರತಿಮೆ: ಮಣ್ಣು ಸಂಗ್ರಹಕ್ಕೆ ಅಭಿಯಾನಕ್ಕೆ ಅಶ್ವಥ್ ಚಾಲನೆ
ರಾಮನಗರ, ಅಕ್ಟೊಬರ್ 23: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಪ್ರತಿಮೆ ಅನಾವರಣ ಹಿನ್ನೆಲೆ ನಾಡಿನಾದ್ಯಂತ ಮೃತ್ತಿಕಾ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾನುವಾರ ರಾಮನಗರದಲ್ಲಿ ಅಭಿಯಾನಕ್ಕೆ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಚಾಲನೆ ನೀಡಿದರು.
ಪವಿತ್ರ ಮಣ್ಣನ್ನು ಸಂಗ್ರಹಿಸುವ ವಾಹನವು ಬೆಳಗ್ಗೆ ಜಿಲ್ಲೆಯ ಗಡಿಯನ್ನು ಹೆಜ್ಜಾಲದಲ್ಲಿ ಪ್ರವೇಶಿಸುತ್ತಿದ್ದಂತೆಯೇ ಜನರು ನೂರಾರು ಬೈಕ್ ಗಳಲ್ಲಿ ಹಾಗೂ ಬೇರೆ ವಾಹನಗಳಲ್ಲಿ ಬಂದು ಸ್ವಾಗತಿಸಿದರು. ಅಲ್ಲಿಂದ ಸಂಭ್ರಮದ ಘೋಷಣೆಗಳ ನಡುವೆ ರಾಮನಗರದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲಾಯಿತು. ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಸೇರಿದಂತೆ ಅಪಾರ ಸಂಖ್ಯೆಯ ಜನರು ಹಾಜರಿದ್ದು ಅಭಿಯಾನವನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್ ಅವರು, ''ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಸಲುವಾಗಿ ರಾಜ್ಯದ ಎಲ್ಲ ಸ್ಥಳಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ. ಈ ಮಣ್ಣನ್ನು ಪ್ರತಿಮೆಯ ಉದ್ದೇಶಿತ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಇದು ರಾಜ್ಯದ ರಾಜಧಾನಿಯನ್ನು ನಿರ್ಮಿಸಿದ ಕೆಂಪೇಗೌಡರಿಗೆ ನಾಡಿನ ಜನರು ಸಲ್ಲಿಸುವ ಗೌರವವಾಗಿರುತ್ತದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೊದಲಿಗೆ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದ ಮಣ್ಣು ಸಂಗ್ರಹಿಸಿದರು. ಬಳಿಕ ಕೆಂಗಲ್ ಗೆ ತೆರಳಿದ ಸಚಿವರು ಅಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಮೃತ್ತಿಕೆ ಸಂಗ್ರಹಿಸಿದರು. ಕೆಂಗಲ್ ದೇವಸ್ಥಾನದ ನಂತರ ಕೆಂಗಲ್ ಹನುಮಂತಯ್ಯ ಅವರು ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜಿಲ್ಲಾಧಿಕಾರಿ ಅವಿನಾಶ ಮೆನನ್, ಎಸ್ಪಿ ಸಂತೋಷ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು, ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ, ಮಾಗಡಿ ತಾಲ್ಲೂಕಿನ ಬಿಜೆಪಿ ಮುಖಂಡ ಪ್ರಸಾದ ಗೌಡ ಸೇರಿದಂತೆ ಅಪಾರ ಸಂಖ್ಯೆಯ ಕೆಂಪೇಗೌಡರ ಅಭಿಮಾನಿಗಳು ಇದ್ದರು.












Click it and Unblock the Notifications