ರಾಮನಗರ: ಹಿಜಾಬ್ ಗೊಂದಲವಿಲ್ಲದೆ ನಡೆದ SSLC ಪರೀಕ್ಷೆ; 346 ವಿದ್ಯಾರ್ಥಿಗಳು ಗೈರು
ರಾಮನಗರ, ಮಾರ್ಚ್ 28: ಸೋಮವಾರದಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ಮೊದಲ ದಿನದ ಪರೀಕ್ಷೆ ನಡೆದಿದೆ. ಅದರಲ್ಲೂ ಹಿಜಾಬ್ ವಿಚಾರದಲ್ಲಿ ಯಾವುದೇ ಗೊಂದಲದ ಘಟನೆಗಳು ನಡೆಯದ ಹಿನ್ನಲೆಯಲ್ಲಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತಾಯಂದಿರೊಂದಿಗೆ ಬಂದಿದ್ದು ವಿಶೇಷವಾಗಿತ್ತು. ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರ ಪ್ರವೇಶ ಮಾಡುವ ಮೊದಲು ಹಿಜಾಬ್ ತೆಗೆದು ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಮಾಡುತ್ತಿದ್ದ ದೃಶ್ಯ ಮಾಮೂಲಾಗಿತ್ತು.
346 ವಿದ್ಯಾರ್ಥಿಗಳು ಗೈರು
ರಾಮನಗರ ಜಿಲ್ಲೆಯಲ್ಲಿ 346 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಪರೀಕ್ಷೆಗೆ ಗೈರಾದವರಲ್ಲಿ 110 ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಸೇರಿದವರಾಗಿದ್ದಾರೆ. ಇವರಲ್ಲಿ 56 ವಿದ್ಯಾರ್ಥಿಗಳು, 54 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದಾರೆ.

ರಾಮನಗರದಲ್ಲಿ 24, ಚನ್ನಪಟ್ಟಣದಲ್ಲಿ 18, ಕನಕಪುರ 1, ಮಾಗಡಿಯಲ್ಲಿ 11ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 13,461 ವಿದ್ಯಾರ್ಥಿಗಳಲ್ಲಿ 1659 ಮುಸ್ಲಿಂ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.
ರಾಮನಗರ ಜಿಲ್ಲೆಯಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲು ರಾಮನಗರ 5, ಕನಕಪುರ 6, ಚನ್ನಪಟ್ಟಣ 6, ಮಾಗಡಿ 4 ಒಟ್ಟು 21 ಮಾರ್ಗ ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ, ಸ್ವಾಧೀನಾಧಿಕಾರಿ, ಪ್ರಶ್ನೆ ಪತ್ರಿಕೆ ಅಧೀಕ್ಷಕರು ಹಾಗೂ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿತ್ತು.
ರಾಮನಗರ ಬಿಇಒ ಪ್ರತಿಕ್ರಿಯೆ
ರಾಮನಗರ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 4032 ವಿದ್ಯಾರ್ಥಿಗಳ ಪೈಕಿ 179 ಮಂದಿ ಗೈರಾಗಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಗೈರಾಗಿದ್ದು, ಈ ಪೈಕಿ 38 ವಿದ್ಯಾರ್ಥಿಗಳು 24 ವಿದ್ಯಾರ್ಥಿನಿಯರು ಸೇರಿದ್ದಾರೆ. ಹಿಜಾಬ್ ವಿಚಾರವಾಗಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಹಿಜಾಬ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ ರಾಮನಗರದ 15 ಪರೀಕ್ಷಾ ಕೇಂದ್ರದಲ್ಲಿ 407 ಮುಸ್ಲಿಂ ವಿದ್ಯಾರ್ಥಿನಿಯರು ನೋಂದಣಿಯಾಗಿದ್ದು, ಇವರಲ್ಲಿ 24 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದು, ಹಿಜಾಬ್‌ಗೆ ಅವಕಾಶ ಸಿಗದೆ ಗೈರಾಗಿರುವ ಮಾಹಿತಿ ಇಲ್ಲ. ತಾಲೂಕಿನಲ್ಲಿ ಎಲ್ಲಿಯೂ ಸಮಸ್ಯೆ ಉಂಟಾಗಿಲ್ಲ ಎಂದು ರಾಮನಗರ ಬಿಇಒ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರೆ.
ಮಾಹಿತಿ ನೀಡಲು ನಿರಾಕರಿಸಿದ ಡಿಡಿಪಿಐ
ಇನ್ನು ರಾಮನಗರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮಕ್ಕಳು ಮತ್ತು ಗೈರಾದ ವಿದ್ಯಾರ್ಥಿಗಳ ಮಾಹಿತಿ ಒದಗಿಸದೆ ಶಿಕ್ಷಣ ಇಲಾಖೆ ಹಾರಿಕೆಯ ಉತ್ತರ ನೀಡಿದೆ. ಮಾಹಿತಿ ನೀಡಲು ನಿರಾಕರಿಸಿದ ಡಿಡಿಪಿಐ ಗಂಗಣ್ಣಸ್ವಾಮಿ, ಪರೀಕ್ಷೆ ಮುಗಿದು 3 ಗಂಟೆ ಕಳೆದರೂ ಮಾಹಿತಿ ಇಲ್ಲದೆ, ಸಂಜೆ ಪತ್ರಿಕಾ ಹೇಳಿಕೆ ಒದಗಿಸುವುದಾಗಿ ಬೇಜವಾಬ್ದಾರಿತನ ಪ್ರದರ್ಶನ ಮಾಡಿದ್ದಲ್ಲದೇ, ಬೇಕಿದ್ದರೆ ಜಿಲ್ಲಾಧಿಕಾರಿ ಕಡೆಯಿಂದ ಮಾಹಿತಿ ಪಡೆಯಿರಿ ಎಂದಿದ್ದಾರೆ.












Click it and Unblock the Notifications