ರಾಮನಗರ ಜಿ.ಪಂ ನೂತನ ಅಧ್ಯಕ್ಷರ ನೇಮಕ: ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಮುಖಂಡರು
ರಾಮನಗರ, ಸೆಪ್ಟೆಂಬರ್ 11: ರಾಮನಗರ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಕೂಟಗಲ್ ಜಿ.ಪಂ ಕ್ಷೇತ್ರದ ಸದಸ್ಯ ಎಚ್.ಎನ್ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧಿಕಾರ ಸಿಕ್ಕ ಮರು ಘಳಿಗೆಯಲ್ಲಿ ನೂತನ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿದರು.
ಮಾಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಎಚ್.ಸಿ ಬಾಲಕೃಷ್ಣ ಸಹೋದರ ಎಚ್.ಎನ್ ಅಶೋಕ್ ಅವರು, ಡಿಕೆಶಿ ಸಹೋದರ ಬೆಂಬಲದೊಂದಿಗೆ ಇಂದು ನಡೆದ ಚುನಾವಣೆಯಲ್ಲಿ ಜಿ.ಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಿಗೆ ಶುಭ ಕೋರಲು ಗುಂಪುಗುಂಪಾಗಿ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಇಲ್ಲದೇ ನೂರಾರು ಜನ ಒಂದೆಡೆ ಸೇರಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದರು.
ಪಂಚಾಯತ್ ಸಭಾಂಗಣದಲ್ಲಿ ಹಾರ-ತುರಾಯಿ ಹಿಡಿದು ಗುಂಪುಗುಂಪಾಗಿ ಸೇರಿದ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಾದ ಅಧ್ಯಕ್ಷರೇ ಸ್ವತಃ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಪಾಲಿಸಲಿಲ್ಲ. ಇನ್ನು ಕೋವಿಡ್-19 ನಿಯಮಗಳನ್ನು ಅನುಷ್ಠಾನಕ್ಕೆ ತಂದು, ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಂಪೂರ್ಣ ವಿಫಲರಾದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಎಚ್.ಎನ್ ಅಶೋಕ್, ""ಕೋವಿಡ್-19 ಸಂಕಷ್ಟದ ಕಾಲದಲ್ಲಿ ಜಿಲ್ಲಾ ಪಂಚಾಯತ್ ಆಡಳಿತವನ್ನು ಸಮರ್ಥವಾಗಿ ನಡೆಸುವುದಾಗಿ'' ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರ ಸ್ವೀಕರಿಸಿದ ಕ್ಷಣದಲ್ಲೇ ಕೋವಿಡ್-19 ನಿಯಮಗಳನ್ನೇ ಗಾಳಿ ತೋರಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, ""ಹೌದು, ತಪ್ಪಾಗಿದೆ ಪ್ರೀತಿಯನ್ನು ವ್ಯಕ್ತಪಡಿಸುವ ಬರದಲ್ಲಿ ಲೋಪವಾಗಿದೆ, ಕ್ಷಮಿಸಿ'' ಎಂದು ವಿಷಾದ ವ್ಯಕ್ತಪಡಿಸಿದರು.












Click it and Unblock the Notifications