ಕುಮಾರಸ್ವಾಮಿ ಕೊಕ್ಕರೆ ಇದ್ದ ಹಾಗೆ, ಯಾವ ಕೆರೆಯಲ್ಲಿ ಹೆಚ್ಚು ಮೀನಿವೆಯೋ ಅಲ್ಲಿಗೆ ಹಾರುತ್ತಾರೆ: ಸಿ.ಪಿ.ಯೋಗೇಶ್ವರ್
ರಾಮನಗರ, ಜನವರಿ, 27: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದ್ದು ಜೆಡಿಎಸ್ ಪಕ್ಷವಾಗಿದೆ. ಅವರು 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಬಹುದು. ಕುಮಾರಸ್ವಾಮಿಯವರು ಕೊಕ್ಕರೆ ಇದ್ದ ಹಾಗೆ, ಯಾವ ಕೆರೆಯಲ್ಲಿ ಮೀನುಗಳಿವೆ ಅಲ್ಲಿಗೆ ಹಾರುತ್ತಾರೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಇಂದು ಚನ್ನಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿ.ಪಿ.ಯೋಗೇಶ್ವರ್, ಅವರ ಸ್ಬರ್ಧೆಯ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಕುಮಾರಸ್ವಾಮಿ ಯವರನ್ನೇ ಕೇಳಿ. ಕುಮಾರಸ್ವಾಮಿಯವರದ್ದು ಸ್ವಂತ ಪಕ್ಷ, ಅವರು 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು.
ಎಲ್ಲಾ ಕ್ಷೇತ್ರಗಳಿಗೂ ಅವರೇ "ಬಿ" ಪಾರಂ ನೀಡುವುದು. ಹಾಗಾಗಿ ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಎಲ್ಲಿ ಪಕ್ಷಕ್ಕೆ ತೊಂದರೆಯಾಗುತ್ತದೆ ಅಲ್ಲಿ ಸ್ಪರ್ಧೆ ಮಾಡಿ ಪಕ್ಷವನ್ನು ಉಳಿಸಬೇಕಿದೆ ಎಂದು ಅವರೇ ಹೇಳಿದ್ದಾರೆ. ಹಾಗಾಗಿ ಎಲ್ಲಿ ತೊಂದರೆ ಇದೆ ಅಲ್ಲಿ ಸ್ಪರ್ಧೆ ಮಾಡಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.

ನಮ್ಮ ಪಕ್ಷ ಹೇಳಿದ ಕಡೆ ಸ್ಪರ್ಧೆ
ನನ್ನ ಕರ್ಮಭೂಮಿ ಚನ್ನಪಟ್ಟಣವಾಗಿದೆ. ರಾಜಕೀಯವಾಗಿ ನನಗೆ ಜನ್ಮ ನೀಡಿದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಹಿಂದಿನಿಂದಲೂ ಈ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಸಹ ಸೇವೆ ಮಾಡಬೇಕು ಎಂಬ ಬಯಕೆ ಇದೆ. ಸದ್ಯಕ್ಕೆ ಬೇರೆ ಕಡೆ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲಿ ಹೇಳುತ್ತಾರೆಯೋ ಅಲ್ಲಿ ಸ್ಪರ್ಧೆ ಮಾಡಬೇಕು ಎಂದು.

ಆದಷ್ಟು ಬೇಗ ಪಕ್ಷ ಸೇರಬಹುದೇನೋ
ಇನ್ನು ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇನ್ನೂ ಮಾತುಕತೆ ನಡೆಯುತ್ತಿದೆ. ನೋಡಬೇಕು, ಬಹಳಷ್ಟು ಜನರು ಹೇಳಿಕೆ ನೀಡುತ್ತಿದ್ದಾರೆ. ಅವರು ಆದಷ್ಟು ಬೇಗ ಪಕ್ಷ ಸೇರಬಹುದೇನೋ ಎಂದು ಉದಾಸೀನದ ಉತ್ತರ ನೀಡಿದರು. ಇತ್ತೀಚಿನ ದಿನಗಳವರೆಗೂ ಸುಮಲತಾ ನನ್ನ ಸಂಪರ್ಕದಲ್ಲಿ ಇದ್ದಾರೆ ಎನ್ನುತ್ತಿದ್ದ ಸಿ.ಪಿ.ಯೋಗೇಶ್ವರ್ ದಿಢೀರನೆ ನಾನು ಇತ್ತೀಚೆಗೆ ಸುಮಲತಾ ಅವರನ್ನು ಸಂಪರ್ಕ ಮಾಡಿಲ್ಲ. ನೋಡೋಣ ಏನು ಆಗುತ್ತದೆ ಎಂಬ ಹೇಳಿಕೆ ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಅಶೋಕ್ ನಮ್ಮ ಪಕ್ಷದ ಹಿರಿಯ ನಾಯಕ
ಮಂಡ್ಯ ಜಿಲ್ಲೆಗೆ ಸಚಿವ ಆರ್.ಅಶೋಕ್ ಅವರಿಗೆ ಉಸ್ತುವಾರಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಮಂಡ್ಯ ಜಿಲ್ಲೆಯಲ್ಲಿ 3 ರಿಂದ 4 ಸ್ಥಾನ ಗೆಲ್ಲಬೇಕಿದೆ. ಅದರಲ್ಲಿ ಅವರು ಯಶಸ್ವಿಯಾಗುತ್ತಾರೆ. ಹಾಗಾಗಿ ಅವರಿಗೆ ಪಕ್ಷ ಜವಾಬ್ದಾರಿ ನೀಡಿದೆ. ನಾನು ಸಹ ಅವರ ಜೊತೆ ಸೇರಿ ಕೆಲಸ ಮಾಡುತ್ತೇನೆ ಎಂದರು.

ಅಶೋಕ್‌ಗೆ ಉಸ್ತುವಾರಿ ಪಟ್ಟ ನೀಡಿದ್ದೇಕೆ?
ಸ್ವಾಭಾವಿಕವಾಗಿ ಮಂಡ್ಯ ಜಿಲ್ಲೆಗೆ ಯಾರು ಉಸ್ತುವಾರಿ ಇರಲಿಲ್ಲ. ಸಚಿವ ಗೋಪಾಲಯ್ಯನವರಿಗೆ ಎರಡು ಕಡೆ ಉಸ್ತುವಾರಿ ಇತ್ತು. ಹಾಗಾಗಿ ಅಶೋಕ್ ಅವರಿಗೆ ಮಂಡ್ಯ ಜಿಲ್ಲೆ ಉಸ್ತುವಾರಿ ನೀಡಿದ್ದಾರೆ. ಮಂಡ್ಯ ಉಸ್ತುವಾರಿ ಅಶೋಕ್ ಅವರಿಗೆ ನೀಡಿದಕ್ಕೆ ಸಣ್ಣಪುಟ್ಟ ವಿರೋಧ ಇರಬಹುದು. ಆದರೆ "ಗೋ ಬ್ಯಾಕ್ ಪೋಸ್ಟರ್" ಹಾಕಿದ್ದು ತಪ್ಪು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.












Click it and Unblock the Notifications