ಸರ್ಕಾರದ ನಿರ್ಲಕ್ಷ್ಯ; ರಾಮನಗರದಲ್ಲಿ 26 ಹಸುಗಳು ಬಲಿ
ರಾಮನಗರ, ಜುಲೈ 02; "ಸರ್ಕಾರ ಮತ್ತು ಅಧಿಕಾರಿಗಳು ಪ್ರತಿ ವರ್ಷದಂತೆ ಮಾರ್ಚ್ ತಿಂಗಳಿನಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ನಿಯಂತ್ರಣದ ಲಸಿಕೆ ಹಾಕದೇ ನಿರ್ಲಕ್ಷ್ಯ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 26ಕ್ಕೂ ಹೆಚ್ಚು ಮಿಶ್ರತಳಿ ಹಸುಗಳು ಸಾವನ್ನಪ್ಪಿವೆ" ಎಂದು ಮಾಜಿ ಬಮೂಲ್ ಅಧ್ಯಕ್ಷ ನಾಗರಾಜು ಆರೋಪಿಸಿದರು.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿ ಅವರು, "ಸರ್ಕಾರ ಪ್ರತಿ 6 ತಿಂಗಳಿಗೊಮ್ಮೆ ರಾಸುಗಳಿಗೆ ಕಾಲುಬಾಯಿ ಜ್ವರ ರೋಗ ಬಾರದಂತೆ ಲಸಿಕೆ ನೀಡುತ್ತಿತ್ತು. ಆದರೆ ಈ ಬಾರಿ ಕೋವಿಡ್ ಆರ್ಭಟದ ಹಿನ್ನಲೆಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಮೈ ಮರೆತು ಹಸುಗಳಿಗೆ ಲಸಿಕೆ ನೀಡಿಲ್ಲ" ಎಂದು ದೂರಿದರು.
" ಕೆಎಂಎಫ್ ನಲ್ಲಿ ಕಾಲುಬಾಯಿ ಜ್ವರ ನಿಯಂತ್ರಣದ ಲಸಿಕೆ ಖರೀದಿಗೆ ಸಾಕಷ್ಟು ಹಣ ಇದೆ. ಆದರೆ ಖಾಸಗಿಯವರು ಖರೀದಿಯನ್ನು ನಿಷೇಧ ಮಾಡಲಾಗಿದೆ. ಸರ್ಕಾರದ ನಿಯಮದಿಂದಾಗಿ ಒಕ್ಕೂಟಕ್ಕೆ ಲಸಿಕೆ ಖರೀದಿ ಸಾಧ್ಯವಾಗಿಲ್ಲ. ಸರ್ಕಾರ ಎಚ್ಚತ್ತು ನಿಯಮದಲ್ಲಿ ತಿದ್ದುಪಡಿ ಮಾಡಬೇಕು" ಎಂದು ಒತ್ತಾಯಿಸಿದರು.

"ಒಕ್ಕೂಟ ಲಸಿಕೆ ಖರೀದಿ ಮಾಡಲಯ ಅವಕಾಶ ಕೊಟ್ಟರೆ ಒಕ್ಕೂಟವೇ ಲಸಿಕೆ ಅಭಿಯಾದ ನಡೆಸಿ ನಮ್ಮ ರೈತರ ಹಸುಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ" ಎಂದು ನಾಗರಾಜು ಸರ್ಕಾರಕ್ಕೆ ಸಲಹೆ ನೀಡಿದರು.
ಮಿಶ್ರತಳಿ ಹಸುಗಳಿಗೆ ಕಾಲುಬಾಯಿ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಪ್ರತಿ ದಿನ 10 ಲೀಟರ್ ಹಾಲು ನೀಡುತ್ತಿದ್ದ ರಾಸು ಜ್ವರದಿಂದಾಗಿ ಕೇವಲ 2 ಲೀಟರ್ ಹಾಲು ನೀಡುತ್ತಿದೆ. ತಾಲೂಕು ಒಂದರಲ್ಲೇ 50 ಸಾವಿರ ಹಸುಗಳಿದ್ದು, ಹಾಲು ಉತ್ಪಾದಕರು ಆತಂಕದಲ್ಲಿದ್ದಾರೆ.
ಬಮೂಲ್ ಒಕ್ಕೂಟದ ವತಿಯಿಂದ ಪ್ರತಿ ತಾಲ್ಲೂಕಿನಲ್ಲಿ ಪಶುವೈದ್ಯರು ಇದ್ದಾರೆ. ಹಾಗಾಗಿ ಸರ್ಕಾರ ಒಕ್ಕೂಟಕ್ಕೆ ಲಸಿಕೆ ಒದಗಿಸಿದರೆ ಒಕ್ಕೂಟವೇ ಲಸಿಕಾ ಅಭಿಯಾನ ನಡೆಸಲು ಸಿದ್ಧವಾಗಿದೆ. ಈಗಾಗಲೇ ಹಸುಗಳಿಗೆ ಜ್ವರ ಕಾಣಿಸಿಕೊಂಡ ಗ್ರಾಮದ ಸುತ್ತಲಿನ 5 ಗ್ರಾಮಗಳ ಹಸುಗಳಿಗೆ ಮಾತ್ರ ಲಸಿಕೆ ನೀಡುತ್ತಿದ್ದಾರೆ.












Click it and Unblock the Notifications