ಹಿಂದೂ ಎಂದು ಕರೆದುಕೊಳ್ಳಲು ಸಿದ್ದರಾಮಯ್ಯ ಅನರ್ಹ: ಯಡಿಯೂರಪ್ಪ
ಚನ್ನಪಟ್ಟಣ, ಜನವರಿ 17: ಬಿಜೆಪಿಯವರು ಕೌರವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರನ್ನು ಭೂತಕ್ಕೆ ಹೋಲಿಸಿದ್ದಾರೆ.
ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು 'ಸಿದ್ದರಾಮಯ್ಯ ಅವರು ತಮ್ಮನ್ನು ಪಾಂಡವರು ಎಂದು ಕರೆದುಕೊಂಡಿದ್ದಾರೆ, ಇದನ್ನು ಕೇಳಿದರೆ, ಭೂತದ ಬಾಯಲ್ಲಿ ಭಗವದ್ಗೀತೆ' ಕೇಳಿದಂತೆ ಆಗುತ್ತಿದೆ ಎಂದು ಕಾಲೆಳೆದಿದ್ದಾರೆ.
ಮೀನು ತಿಂದು ಧರ್ಮಸ್ಥಳಕ್ಕೆ ಹೋದ, ಉಡುಪಿ ಶ್ರೀಕೃಷ್ಣನ ದರ್ಶನ ಮಾಡಲು ಇಚ್ಛಿಸದ ಸಿದ್ದರಾಮಯ್ಯ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಅರ್ಹರಲ್ಲ, ಆದರೂ ಅವರು ನನ್ನ ಹೆಸರಲ್ಲಿ ರಾಮ ಇದ್ದಾನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ, ಆದರೆ ಅವರ ಎದೆಯಲ್ಲಿ ರಾಮ ಇಲ್ಲ ಎಂದು ವ್ಯಂಗ್ಯ ಮಾಡಿದರು.

ವಿಜಯೋತ್ಸಕ್ಕೆ ಬಂದಂತೆ ಭಾಸ
ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆಂದು ಭಾರಿ ಸಂಖ್ಯೆಯಲ್ಲಿ ಶಾಸಕ ಸಿಪಿ ಯೋಗೇಶ್ವರ್ ಅವರು ಕಾರ್ಯಕರ್ತರನ್ನು ಸೇರಿಸಿದ್ದರು. ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ಕಂಡು ಖುಷಿಯಾದ ಯಡಿಯೂರಪ್ಪ ಅವರು, ಚನ್ನಪಟ್ಟಣಕ್ಕೆ ಪರಿವರ್ತನಾ ಯಾತ್ರೆಗೆ ಬಂದಂತಿಲ್ಲ, ಯೋಗೇಶ್ವರ್ ಅವರ ವಿಜಯೋತ್ಸವಕ್ಕೆ ಬಂದಂತಿದೆ ಎಂದರು.

ಮೋದಿ ಮುಂದೆ ಮಾತನಾಡುತ್ತೇನೆ
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯಕ್ಕಾಗಿ ಏನು ಮಾಡಬೇಕು ಎಂಬ ನೀಲಿ ನಕ್ಷೆ ತಯಾರಿಸಿದ್ದೇನೆ ಆ ಬಗ್ಗೆ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತೇನೆ ಎಂದ ಯಡಿಯೂರಪ್ಪ, ಸಮಾರೋಪ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಅವರ ಮುಂದೆ ನನ್ನ ಕನಸುಗಳನ್ನು ಹಂಚಿಕೊಳ್ಳುತ್ತೇನೆ, ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಮಾರೋಪ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದರು.

ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ
ರಾಜ್ಯದ ಖಜಾನೆಯನ್ನು ಸಂಪೂರ್ಣ ಬರಿದು ಮಾಡಿರುವ ಸಿದ್ದರಾಮಯ್ಯ ಅವರು ಈಗ ಸಾಲದ ಹಣದಲ್ಲಿ ರಾಜ್ಯ ಚಲಾಯಿಸುತ್ತಿದ್ದಾರೆ. 14 ವರ್ಷದಲ್ಲಿ ಮಾಡದೇ ಇದ್ದ ಸಾಲವನ್ನು ಸಿದ್ದರಾಮಯ್ಯ ಅವರು ತಮ್ಮ ನಾಲ್ಕು ಮುಕ್ಕಾಲು ವರ್ಷದಲ್ಲಿ ಮಾಡಿ ಮುಗಿಸಿದ್ದಾರೆ, ಸಿದ್ದರಾಮಯ್ಯ ಅವರು ಒಟ್ಟು 2.40 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ತಲೆ ಇಲ್ಲದ ಸರ್ಕಾರ
ಮರಳು ಹರಾಜು ನೀತಿ ಬಗ್ಗೆ ಹಾಗೂ ಅಧಿಕಾರಿಗಳ ವರ್ಗಾವಣೆ ಬಗ್ಗೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಪರಾಕಿ ಹಾಕಿರುವುದನ್ನು ನೆನೆಸಿದ ಯಡಿಯೂರಪ್ಪ ಅವರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ರಾಜ್ಯ ಸರ್ಕಾರಕ್ಕೆ ತಲೆ ಇಲ್ಲ ಎಂದು ಬೈದಿದ್ದಾರೆ. ಇಂತಹಾ ಆಡಳಿತ ಮಾಡುತ್ತಿರುವ ಸಿದ್ದರಾಮಯ್ಯ ಅವರದ್ದು, ತುಘಲಕ್ ಸರ್ಕಾರವಲ್ಲದೇ ಇನ್ನೇನು ಎಂದು ಪ್ರಶ್ನೆ ಮಾಡಿದರು.












Click it and Unblock the Notifications