ಉಕ್ರೇನ್‌ನಿಂದ ಹಂಗೇರಿ, ಸ್ಲೋವಾಕಿಯಾ ತಲುಪಿದ ರಾಮನಗರದ ವಿದ್ಯಾರ್ಥಿನಿಯರು; ಪೋಷಕರಲ್ಲಿ ಆತಂಕ
ರಾಮನಗರ, ಮಾರ್ಚ್ 5: ಯುದ್ಧ ಪೀಡಿತ ಉಕ್ರೇನ್‌ನ ಜಪೋರಿಝಿಯಾದಲ್ಲಿರುವ ಯುರೋಪಿನ ಅತಿದೊಡ್ಡ ಅಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿದ ಹಿನ್ನಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ರಾಮನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳ ಪೋಷಕರು ಭೀತಿಯಿಂದ ದಿನ ದೂಡುತ್ತಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿದ್ದ ರಾಮನಗರ ಹಾಗೂ ಚನ್ನಪಟ್ಟಣದ ಇಬ್ಬರು ವಿದ್ಯಾರ್ಥಿನಿಯರು ಯುದ್ಧ ಪೀಡಿತ ಪ್ರದೇಶದಿಂದ ಬೇರೆ ದೇಶಗಳಿಗೆ ಗಡಿ ತಲುಪಿದ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರ ಪೋಷಕರು ನಿರಾಳಗೊಂಡಿದ್ದರೂ, ಇನ್ನೂ ಆತಂಕ ಮನೆ ಮಾಡಿದೆ.
ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ತೆರಳಿದ್ದ ರಾಮನಗರದ ಐಜೂರು ನಿವಾಸಿ ಆಯೇಷಾ ಕೌಸರ್, ಚನ್ನಪಟ್ಟಣದ ತಿಮ್ಮಸಂದ್ರ ನಿವಾಸಿ ನಿವೇದಿತಾ ಕಳೆದ ಏಳು ದಿನಗಳಿಂದ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು.

ಇನ್ನು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದ ಈ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಬರಲೆಂದು ಇಬ್ಬರ ಪೋಷಕರು ದಿನನಿತ್ಯವೂ ಪ್ರಾರ್ಥನೆ ಮಾಡುತ್ತಿದರು. ಇದೀಗ ಬೇರೆ ಬೇರೆ ಸ್ಥಳದಲ್ಲಿ ಸಿಲುಕಿದ್ದ ಆಯೇಷಾ ಕೌಸರ್ ಹಾಗೂ ನಿವೇದಿತಾ ಸುರಕ್ಷಿತ ಸ್ಥಳಗಳಿಗೆ ತಲುಪಿರುವ ಹಿನ್ನಲೆಯಲ್ಲಿ ಆತಂಕದಲ್ಲಿದ್ದ ಈ ಇಬ್ಬರು ವಿದ್ಯಾರ್ಥಿನಿಯರ ಪೋಷಕರು ನಿರಾಳರಾಗಿದ್ದಾರೆ.
ಹಂಗೇರಿ ತಲುಪಿದ ನಿವೇದಿತಾ
ಜಪೋರಿಝಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚನ್ನಪಟ್ಟಣದ ನಿವೇದಿತಾ ಅಣು ವಿದ್ಯುತ್ ಸ್ಥಾವರದ ಮೇಲಿನ ದಾಳಿಗೂ ಮುನ್ನವೇ ಸೇಫ್ ಆಗಿ ಟ್ರೈನ್ ಮೂಲಕ ಹಂಗೇರಿ ದೇಶವನ್ನು ತಲುಪಿದ್ದು, ಪೋಷಕರಿಗೆ ನಾನು ಸೇಫ್ ಎಂದು ನಿವೇದಿತಾ ಮೆಸೇಜ್ ಮಾಡಿದ್ದಾಳೆ.

ನಿವೇದಿತಾ ಸಂದೇಶದಿಂದ ಆಕೆಯ ತಂದೆ ಚಂದ್ರಶೇಖರ್, ತಾಯಿ ವಿನುತಾ ಸಮಾಧಾನದಿಂದ ತಮ್ಮ ಮಗಳು ತಾಯ್ನಾಡಿಗೆ ಬೇಗ ಮರಳಲಿ ಎಂದು ಕಾಯುತ್ತಿದ್ದಾರೆ. ಇನ್ನೂ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ತೆರಳಲು ಕಾಯುತ್ತಿರುವ ಹಿನ್ನಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿವೇದಿತಾ ತಾಯ್ನಾಡಿಗೆ ಮರಳಲಿದ್ದಾರೆ.
ಲಗೇಜ್‌ಗಳನ್ನು ಉಕ್ರೇನ್‌ನಲ್ಲೇ ಎಸೆದು, ಕಾಲ್ನಡಿಗೆಯಲ್ಲೇ ಸ್ಲೋವಾಕಿಯಾ ತಲುಪಿದ ಆಯೇಷಾ
ಉಕ್ರೇನ್ ಲಿವೈವ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಯೇಷಾ ಕೌಸರ್, ಕಳೆದ ಮೂರು ತಿಂಗಳ ಹಿಂದೆ ಮೆಡಿಕಲ್ ವ್ಯಾಸಂಗಕ್ಕೆ ಉಕ್ರೇನ್ ತೆರಳಿದ್ದರು. ಯುದ್ಧ ಪ್ರಾರಂಭ ದಿನದಿಂದ ಬಂಕರ್‌ನಲ್ಲಿ ಉಳಿದುಕೊಂಡಿದ್ದ ಆಯೇಷಾ, ಉಕ್ರೇನ್‌ನಿಂದ ಹೇಗೋ ಹೊರಬಂದು ಸ್ಲೋವಾಕಿಯಾದಲ್ಲಿ ತಂಗಿದ್ದಾಳೆ.
ಉಕ್ರೇನ್‌ನಿಂದ ಸುಮಾರು 40 ಭಾರತೀಯ ವಿದ್ಯಾರ್ಥಿಗಳೊಂದಿಗೆ ಹೊರಟ ಆಯೇಷಾ ಕೌಸರ್, ತಮ್ಮ ಲಗೇಜ್‌ಗಳನ್ನು ಉಕ್ರೇನ್‌ನಲ್ಲೇ ಬಿಸಾಕಿ, ಅಗತ್ಯ ದಾಖಲೆಗಳನ್ನು ಮಾತ್ರ ತೆಗೆದುಕೊಂಡು ಊಟ-ತಿಂಡಿಯಿಲ್ಲದೇ 18 ಕಿ.ಮೀ ನಡೆದು ನರಕಯಾತನೆ ಪಟ್ಟು ಸ್ಲೋವಾಕಿಯಾ ತಲುಪಿದ್ದಾಳೆ.
ಈ ಬಗ್ಗೆ ಮಾತನಾಡಿದ ಆಯೇಷಾ ಕೌಸರ್ ಪೋಷಕರು, "ತಮ್ಮ ಮಗಳು ಸ್ಲೋವಾಕಿಯಾ ತಲುಪಿರುವುದು ಸಮಾಧಾನ ತಂದಿದೆ. ನಮ್ಮ ಮಗಳು ಗಡಿ ದಾಟುವ ಮುನ್ನ ಸುಮಾರು 1500 ವಿದ್ಯಾರ್ಥಿಗಳು ಭಾರತಕ್ಕೆ ತೆರಳಲು ಕಾಯುತ್ತಿದ್ದಾರೆ. ಅಲ್ಲದೇ ಇನ್ನೂ ಗಡಿ ದಾಟಲು ಸುಮಾರು 2 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಗಡಿಯಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ ಎಂಬ ವಿಷಯವನ್ನು ತಮ್ಮ ಮಗಳು ಆಯೇಷಾ ತಿಳಿಸಿದಳು," ಎಂದು ಆಯೇಷಾ ತಂದೆ ಜೋಹರ್ ಪಾಷ ತಿಳಿಸಿದರು.
ಆಯೇಷಾ ಚಿಕ್ಕಪ್ಪ ಕೌಸರ್ ಪಾಷ ಮಾತನಾಡಿ, "ಭಾರತ ಸರ್ಕಾರ ಇತರೆ ಉಕ್ರೇನ್ ಗಡಿಗಳಿಂದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಎರಡು ಮೂರು ವಿಮಾನಗಳ ವ್ಯವಸ್ಥೆ ಮಾಡಿದೆ. ಆದರೆ ಸ್ಲೋವಾಕಿಯಾ ಗಡಿಯಿಂದ ಪ್ರತಿ ದಿನ ಕೇವಲ ಒಂದು ವಿಮಾನ ಸಂಚರಿಸುತ್ತಿದೆ ಹಾಗಾಗಿ ತಡವಾಗುತ್ತಿದೆ. ಭಾರತೀಯ ವಿದ್ಯಾರ್ಥಿಗಳು ಸ್ಲೋವಾಕಿಯಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಅಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ಲೈಟ್‌ಗಳನ್ನು ಕಳುಹಿಸಿ ಪ್ರತಿ ಭಾರತೀಯರನ್ನು ಸುರಕ್ಷತೆಯಿಂದ ಕೇಂದ್ರ ಸರ್ಕಾರ ಕರೆ ತರಬೇಕೆಂದು,'' ಮನವಿ ಮಾಡಿದರು.












Click it and Unblock the Notifications