ಕಳೆದ 6 ತಿಂಗಳಲ್ಲಿನಿಂದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಿತ್ಯ ಸಾವಿರಾರು ಕಾರ್ಮಿಕರು ಗೈರು, ವಿಭಾಗವಾರು ಮಾಹಿತಿ
ರಾಯಚೂರು, ಅಕ್ಟೋಬರ್, 21: ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಿತ್ಯ ಸಾವಿರ ಕಾರ್ಮಿಕರು ನಾನಾ ನೆಪವೊಡ್ಡಿ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದು, ಚಿನ್ನದ ಉತ್ಪಾದನೆಯ ಗುರಿ ತಲುಪುವಲ್ಲಿ ತೀವ್ರ ಹಿನ್ನೆಡೆ ಅನುಭವಿಸುವಂತಾಗಿದೆ. ಹೀಗೆ ಕಾರ್ಮಿಕರು ಪದೇ ಪದೆ ಗೈರು ಹಾಜರಾಗುತ್ತಿರುವುದು ಗಣಿ ಅಧಿಕಾರಿಗಳ ತಲೆಬಿಸಿ ಹೆಚ್ಚಿಸಿದೆ.
ಗಣಿ ಕಂಪನಿಯ ನಿರ್ದೇಶಕ ಮಂಡಳಿ ನೀಡಿದ ವಾರ್ಷಿಕ ಚಿನ್ನ ಉತ್ಪಾದನೆ ಗುರಿ ತಲುಪುವುದು ಅಧಿಕಾರಿಗಳಿಗೆ ಅನಿವಾರ್ಯ. ಶೇಕಡಾ 80ರಷ್ಟಾದರೂ ಉತ್ಪಾದನೆಯಲ್ಲಿ ಗುರಿ ದಾಖಲಿಸಬೇಕು. ಆದರೆ ಈ ಗುರಿ ತಲುಪುವ ಹಾದಿಯಲ್ಲಿ ಕಾರ್ಮಿಕರ ಸಾಮೂಹಿಕ ಗೈರು ಹಾಜರಿ ನುಂಗಲಾರದ ಬಿಸಿ ತುಪ್ಪವಾಗಿದೆ. ಲೇಬರ್ ಕೆಟಗರಿಯಲ್ಲಿರುವ 3,700 ಕಾರ್ಮಿಕರಲ್ಲಿ 1,000 ಕಾರ್ಮಿಕರು ಮೂರು ಪಾಳಿ ಸೇರಿ ನಿತ್ಯ ಗೈರು ಹಾಜರಾಗುತ್ತಿರುವುದು ಅಂಕಿ ಅಂಶದಿಂದ ಬಯಲಾಗಿದೆ.

ಗಣಿ ಕಂಪನಿ ಕಳೆದ 6 ತಿಂಗಳಲ್ಲಿ(ಏಪ್ರಿಲ್ 2023 ರಿಂದ ಸೆಪ್ಟೆಂಬರ್ 2023ರ ಅವಧಿ) ಕಾರ್ಮಿಕರ ಹಾಜರಾತಿ ಪರಿಶೀಲಿಸಿದಾಗ 1,054 ಜನ ಕಾರ್ಮಿಕರು ನಿತ್ಯ ಗೈರು ಹಾಜರಾಗಿರುವುದು ಕಂಡುಬಂದಿದೆ. ಈ ಗೈರು ಹಾಜರಿಯಲ್ಲಿ ಭೂಕೆಳಮೈ ವಿಭಾಗದ ಕಾರ್ಮಿಕರ ಪಾಲು ಹೆಚ್ಚಿನ ಸಂಖ್ಯೆಯಲ್ಲಿದೆ. ಎಂ/ಎಸ್ ಶಾಫ್ಟ್-470, ಸಿ/ಎಸ್ ಶಾಫ್ಟ್-190, ವಿ/ಎಸ್ ಶಾಫ್ಟ್-61, ತಾಂತ್ರಿಕ ವಿಭಾಗ-131, ಲೋಹ ವಿಭಾಗ-77, ಊಟಿ ಹಾಗೂ ಹೀರಾ ಬುದ್ದೀನ್ನಿ ಗಣಿಗಳಲ್ಲಿ-97, ಉಳಿದಂತೆ ಅಡ್ಮಿನ್, ಆಸ್ಪತ್ರೆ, ಕ್ಯಾಂಟೀನ್, ಭದ್ರತಾ ವಿಭಾಗ ಸೇರಿದಂತೆ 1054 ಜನ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿರುವುದನ್ನು ದಾಖಲಾತಿಗಳು ಸಾಕ್ಷಿ ನುಡಿಯುತ್ತಿವೆ.
ಕೆಲವು ಕಾರ್ಮಿಕರು 15 ದಿನ ಕೆಲಸ ಮಾಡುವುದು, ಉಳಿದ 15 ದಿನ ಗೈರು ಹಾಜರಾದರೆ, ಇನ್ನೂ ಕೆಲವರು ನಿರಂತರ ಗೈರು ಹಾಜರಾಗುತ್ತಿದ್ದಾರೆ. ನಿರಂತರ ಗೈರು ಹಾಜರಾಗುವವರ ಸಂಖ್ಯೆಯೇ ಬಹಳ. ಕಾರ್ಮಿಕರ ಪದೇ ಪದೆ ಗೈರು ಹಾಜರಿ ಗಣಿ ಕಂಪನಿಯ ಉತ್ಪಾದನೆ ಹಾಗೂ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಗಣಿ ಆಡಳಿತ ವರ್ಗ ಸೆಪ್ಟೆಂಬರ್ 7ರಂದು ಗೈರುಹಾಜರಾದ ಕಾರ್ಮಿಕರಿಗೆ ನೋಟಿಸ್ ಜಾರಿಗೊಳಿಸಿದೆ.
ಕ್ರಮದ ಎಚ್ಚರಿಕೆಯ ಮಧ್ಯೆಯೂ ಕಾರ್ಮಿಕರ ಹಾಜರಿಯಲ್ಲಿಸುಧಾರಣೆ ಕಾಣದ್ದರಿಂದ ಇದೀಗ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೈರು ಹಾಜರಾಗುವ ಕಾರ್ಮಿಕರಿಗೆ ಮತ್ತೊಂದು ನೋಟಿಸ್ ಜಾರಿಗೊಳಿಸಿದೆ. ಗಣಿ ಆಡಳಿತ ವರ್ಗ ಯಾವ ಕ್ರಮಕೈಗೊಳ್ಳಲಿದೆ? ಕಾರ್ಮಿಕರ ರಕ್ಷಣೆಗೆ ಕಾರ್ಮಿಕ ಸಂಘದ ಮುಖಂಡರು ಏನು ಮಾಡಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.
ಪದೇ ಪದೆ ಗೈರು ಹಾಜರಾಗುತ್ತಿರುವ ಕಾರ್ಮಿಕರಿಗೆ ಕೌನ್ಸೆಲಿಂಗ್ ಮಾಡಲಾಗಿದೆ. ನೋಟಿಸ್ ನೀಡಿ ಎಚ್ಚರಿಕೆ ನೀಡಿದರೂ ತಮ್ಮ ಚಾಳಿ ಬಿಡುತ್ತಿಲ್ಲ. ನಿತ್ಯ ಸರಾಸರಿ 1,000 ಕಾರ್ಮಿಕರ ಗೈರು ಹಾಜರಿ ಉತ್ಪಾದನೆಗೆ ಧಕ್ಕೆಯಾಗುತ್ತಿದೆ. ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಪಾಲಿಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹಟ್ಟಿ ಚಿನ್ನದಗಣಿ ಕಂಪನಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಹನುಮಂತಪ್ಪ ನೀರಮಾನ್ವಿ ಮಾಹಿತಿ ನೀಡಿದ್ದಾರೆ.












Click it and Unblock the Notifications